ಗದಗ 28: ರಾಜ್ಯದಲ್ಲಿನ ಬೆಳೆ ಹಾನಿ ವೀಕ್ಷಣೆಗೆ ಆಗಮಿಸಿರುವ ಕೇಂದ್ರ ತಂಡವಿಂದು ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದ ಜಮೀನುಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಗದಗ ತಾಲೂಕಿನ ಕೊಟುಮಚಗಿ ಹಂಚಿನಾಳ ರಸ್ತೆಯಲ್ಲಿ ನರೇಗಾ ಮತ್ತು ಕೃಷಿ ಭಾಗ್ಯ ಯೋಜನೆಯಲ್ಲಿ ಕೈಗೊಳ್ಳಲಾದ ಜಲಸಂವರ್ಧನೆ ಕಾಮಗಾರಿಗಳನ್ನು ಪರಿಶೀಲಿಸಿತು.
ವಿಜಯಪುರ ಜಿಲ್ಲೆಯ ಆಲಮಟ್ಟಿಯಿಂದ ಆಗಮಿಸಿದ ಕೆಂದ್ರ ಅಧ್ಯಯನ ತಂಡದ ನೇತೃತ್ವವನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಎಸ್.ಕೆ.ಕಾಂಬೊಜ ಅವರ ನೇತೃತ್ವ ವಹಿಸಿದ್ದು, ಕೇಂದ್ರ ಸಕಾರದ ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ.ತರುಣ ಕುಮಾರ ಸಿಂಗ್, ಭಾರತೀಯ ಆಹಾರ ನಿಗಮದ ಡೆಪ್ಯುಟಿ ಜನರಲ್ ಮ್ಯಾನೆಜರ ಸತ್ಯ ಕುಮಾರ ತಂಡದಲ್ಲಿದ್ದರು.
ರೋಣ ತಾಲೂಕಿನ ನಿಡಗುಂದಿ ಗ್ರಾಮದ ಸಿದ್ದಪ್ಪ ಕರಿಯಪ್ಪ ಕಟ್ಟಿಯವರ 4 ಎಕರೆ 11 ಗುಂಟೆ ಹೊಲದಲ್ಲಿ ಕಡಲೆ ಬೆಳೆ, ಹಾಗೂ ಮಲ್ಲೇಶಪ್ಪ ಸುರವಿಯವರ ಹೊಲದಲ್ಲಿ ಕಡಲೆ ಹಾಗೂ ಕುಸುಬಿ ಬೆಳೆ ಹಾನಿ ವೀಕ್ಷಿಸಿ ರೈತರ ಅಹವಾಲು ಆಲಿಸಿದರು. ಗದಗ ಜಿಲ್ಲಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿ.ಇ.ಒ ಮಂಜುನಾಥ ಚವ್ಹಾನ ಅವರುಗಳು ಕೇಂದ್ರ ತಂಡದ ಹಾಗೂ ರೈತರ ನಡುವಿನ ಸಂವಾದವನ್ನು ಭಾಷಾಂತರಗೊಳಿಸಿ ಸಮಾಲೋಚನೆಗೆ ನೆರವಾದರು.
ಗದಗ ತಾಲೂಕಿನ ಕೋಟುಮಚಗಿ ಗ್ರಾಮದಿಂದ ಹಂಚಿನಾಳ ರಸ್ತೆಯಲ್ಲಿ ನರೇಗಾ ಮತ್ತು ಕೃಷಿ ಭಾಗ್ಯ ಯೋಜನೆಗಳ ಸಂಯೋಜನೆಯಲ್ಲಿ ಕೈಕೊಳ್ಳಲಾದ ಜಲಸಂವರ್ಧನೆ ಕಾಮಗಾರಿಯನ್ನು ವೀಕ್ಷಿಸಿದರು. ಈ ಯೋಜನೆ ಮಾಹಿತಿ ಜೊತೆಗೆ ಅಲ್ಲಿ ಕೃಷಿ ಕೂಲಿಕಾರರಿಗೆ ಉದ್ಯೋಗ ನೀಡಿರುವದನ್ನು ವೀಕ್ಷಿಸಿದರು. ಯೋಜನೆಯ ಮಾಹಿತಿ ಜೊತೆಗೆ ಕೃಷಿ ಕೂಲಿಕಾರರೊಂದಿಗೆ ಮಾತನಾಡಿ ಅವರಿಗೆ ಎಷ್ಟು ದಿನಗಳ ಉದ್ಯೋಗ ನೀಡಲಾಗುತ್ತದೆ, ಪಡೆಯುವ ಕೂಲಿ ಎಷ್ಟು, ನಿಗದಿತ ಅವಧಿಯಲ್ಲಿ ಕೂಲಿ ಪಾವತಿಸಲಾಗುತ್ತಿರುವ ಕುರಿತು ವಿಚಾರಿಸಿದರು.
ಜಿ.ಪಂ. ಸಿ.ಇ.ಓ ಮಂಜುನಾಥ ಚವ್ಹಾಣ, ರಿಜ್ ವ್ಯಾಲ್ಯೂ ಯೋಜನೆಯಡಿ ಎಲ್ಲ ರೈತರ ಜಮೀನುಗಳಿಗೆ ಜಲ ಸಂವರ್ಧನೆ ಕಾಮಗಾರಿ ಕೈಕೊಳ್ಳಲು ಅವಕಾಶವಿದ್ದು ಸದರಿ ಕಾಮಗಾರಿಯಲ್ಲಿ 406.65 ಹೆಕ್ಟೆರ ಜಮೀನಿನಲ್ಲಿ ಜಲಸಂವರ್ಧನೆ ಕಾಮಗಾರಿಯನ್ನು ನರೇಗಾ ಯೋಜನಾಯಡಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ 6 ಕಿರು ಜಲಾನಯನ ಯೋಜನೆಗಳಡಿ 1074 ಹೆಕ್ಟೆರ ಜಮೀನುಗಳ ಜಲಸಂವರ್ಧನೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಮ ಕೈಕೊಳ್ಳಲಾಗಿದ್ದು ಇದರ ಒಟ್ಟಾರೆ ಯೋಜನಾ ವೆಚ್ಚ 8.11 ಕೋಟಿ ರೂ. ಇದ್ದು ಉದ್ಯೋಗ ಖಾತ್ರಿ ಯೋಜನೆಯಲ್ಲಿ 7.31 ಕೋಟಿ ರೂ. ಹಾಗೂ ಕೃಷಿ ಭಾಗ್ಯ ಯೋಜನೆಯಡಿ 80 ಲಕ್ಷಗಳನ್ನು ಸಂಯೋಜಿಸಿ ಒಟ್ಟಾರೆ 2.83 ಲಕ್ಷ ಉದ್ಯೋಗ ದಿನಗಳನ್ನು ಸೃಜಿಸಲಾಗುತ್ತಿದೆ. ಇವರೆಗೆ ಒಟ್ಟು 42 ಸಾವಿರ ಉದ್ಯೋಗ ದಿನಗಳನ್ನು ಇಲ್ಲಿ ಸೃಜಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ರೋಣ ತಹಶೀಲ್ದಾರ ಶರಣಮ್ಮ ಕಾರಿ, ಗಜೇಂದ್ರಗಡ ತಹಶೀಲ್ದಾರ ಹಿರೇಮಠ, ಕೃಷಿ ಇಲಾಖೆ ಜಂಟಿ ನಿದರ್ೇಶಕ ಬಾಲರೆಡ್ಡಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಜೊತೆಗಿದ್ದರು.