ಡಾ.ಶರಣಬಸಪ್ಪ ಕೋಲ್ಕಾರಗೆ ಶರಣಶ್ರೀ ಪ್ರಶಸ್ತಿ ಪ್ರಧಾನ

Dr. Sharanbasappa Kolkara was awarded Sharanshri Award

ಡಾ.ಶರಣಬಸಪ್ಪ ಕೋಲ್ಕಾರಗೆ ಶರಣಶ್ರೀ ಪ್ರಶಸ್ತಿ ಪ್ರಧಾನ

ಕಂಪ್ಲಿ 23: ಪಟ್ಟಣದ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶನಿವಾರ 175ನೇ ಮಹಾಮನೆ ಕಾರ್ಯಕ್ರಮ, ಶರಣಶ್ರೀ ಪ್ರಧಾನ ಹಮ್ಮಿಕೊಳ್ಳಲಾಗಿತ್ತು. ಗಂಗಾವತಿಯ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಶರಣಬಸಪ್ಪ ಕೋಲ್ಕಾರ ‘ಶರಣರು ಮತ್ತು ಸಾಮಾಜಿಕ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿ, ಪ್ರಸ್ತುತ ದಿನಮಾನಗಳಲ್ಲಿ ಬದುಕು ಸಂಕೀರ್ಣವಾಗಿ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಕುಟುಂಬಗಳು ವಿಘಟಿತಗೊಳ್ಳುತ್ತ ಆಡಂಬರದ ಶೈಲಿಯಿಂದಾಗಿ ಸಮಾಜ ದಾರಿ ತಪ್ಪುತ್ತಿದೆ. ಶರಣರು ಬದುಕಿಗೆ ಹೊಸ ಅರ್ಥನೀಡಿದರು. ಮನುಕುಲದ ಉದ್ಧಾರಕ್ಕಾಗಿ ಅನುಭವ ಮಂಟಪವನ್ನು ಪ್ರಾಯೋಗಶಾಲೆಯನ್ನಾಗಿ ರೂಪಿಸಿಕೊಂಡಿದ್ದರು. ಅಂತರಂಗ ಬಹಿರಂಗ ಶುದ್ಧತೆಗೆ ಬಸವಣ್ಣನವರ ಸಪ್ತಸೂತ್ರಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಸ್ತ್ರೀಯರು ಸಾಧನೆಗೆ ಅಡ್ಡಿಯಲ್ಲ. ಶರಣರು ಸ್ತ್ರೀಯನ್ನು ಸಾಧನೆಯ ಭಾಗವಾಗಿ ಅಳವಡಿಸಿಕೊಂಡಿದ್ದರು. ನದಿಗಳು ಸ್ವಚ್ಛತೆ ಕಳೆದುಕೊಳ್ಳುತ್ತಿದ್ದು ಶುದ್ದೀಕರಿಸುವ ಮೂಲಕ ಪಾವಿತ್ರ್ಯತೆ ಕಾಪಾಡಬೇಕಿದೆ.  ಆಚರಣೆಗಳು ಅರ್ಥಕಳೆದುಕೊಳ್ಳುತ್ತಿದ್ದು ವೈಚಾರಿಕ, ತಾತ್ವಿಕತೆ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದರು. ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಮಾತನಾಡಿ, ಶರಣರ ತಾತ್ವಿಕ ವಿಚಾರಗಳು ಜೀವನದ ಪ್ರತಿಸ್ತರದಲ್ಲೂ ಅಳವಡಿಕೆಯಾಗಬೇಕು ಎಂದರು. ಎಮ್ಮಿಗನೂರಿನ ಪಬ್ಲಿಕ್ ಶಾಲೆ ಶಿಕ್ಷಕಿ ಡಾ.ಎಸ್‌.ಎಂ.ಸಾವಿತ್ರಿ ಮಾತನಾಡಿ, ಮಹಿಳೆ ಆರ್ಥಿಕ ಶಿಸ್ತಿನೊಂದಿಗೆ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕಲು ಸಾಧ್ಯ. ಇಂದಿನ ಮಕ್ಕಳು ಹೆಚ್ಚೆಚ್ಚು ಅಂಕಗಳಿಸುವತ್ತ ನೀಡುವ ಗಮನ ಸಂಸ್ಕಾರ ಅಳವಡಿಸಿಕೊಳ್ಳುವಲ್ಲಿ ಮುಂದಾಗುತ್ತಿಲ್ಲ ಎಂದು ವಿಷಾಧಿಸಿದರು. ಶ್ರೀಪೇಟೆ ಬಸವೇಶ್ವರ ಸೌಹಾರ್ಧ ಸಹಕಾರಿ ಸಂಘದ ನಿರ್ದೇಶಕ ಕೃಷ್ಣ ಎಸ್‌.ಪೋಳ ಮಾತನಾಡಿ, ಆಧುನಿಕ ತಂತ್ರಜ್ಞಾನ ಸದ್ಭಳಕೆಗಿಂತ ದುರ್ಬಳಕೆಗೀಡಾಗುತ್ತಿರುವುದು ವಿಷಾಧನೀಯ.  ಮಹಿಳೆಯರು ಶಿಕ್ಷಣಗಳಿಕೆಯ ಜೊತೆಗೆ ಸಂಪ್ರದಾಯ ಆಚರಣೆಗಳಿಂದ ವಿಮುಖರಾಗಬಾರದು ಎಂದರು. ಪರಿಷತ್ ಅಧ್ಯಕ್ಷ ಜಿ.ಪ್ರಕಾಶ ಅಧ್ಯಕ್ಷತೆವಹಿಸಿ ಮಾತನಾಡಿ, ಬಸವಣ್ಣನವರ ವಿಚಾರಗಳು ಕೇವಲ ಭಾಷಣದ ಸರಕಾಗಿದೆ. ಬಸವ ತತ್ವಗಳು ಜೀವನದಲ್ಲಿ ಅನುಷ್ಠಾನಗೊಂಡಲ್ಲಿ ಮಾತ್ರ ಅರ್ಥಪೂರ್ಣಜೀವನ ಸಾಗಿಸಲು ಸಾಧ್ಯ ಎಂದರು.ಶರಣ ಸಾಹಿತ್ಯ ಪರಿಷತ್‌ನಲ್ಲಿ ವಚನ ಸಾಹಿತ್ಯ ಉಪನ್ಯಾಸಕ್ಕಾಗಿ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿಯವರು ತಂದೆತಾಯಿಗಳಾದ ಲಿಂ.ಚನ್ನಬಸಯ್ಯ ಲಿಂ.ಪಾರ್ವತಮ್ಮ ಹೆಸರಿನಲ್ಲಿ 25ಸಾವಿರ ರೂಪಾಯಿಗಳ  ದತ್ತಿ ಸ್ಥಾಪಿಸಿದರು. ಶರಣ ಸಾಹಿತ್ಯ ಚಿಂತನೆ, ಪ್ರಚಾರ ಸೇರಿ ನಾನಾ ಕ್ಷೇತ್ರಗಳಲ್ಲಿನ ಜೀವನಶ್ರೇಷ್ಠ ಸಾಧನೆಗಾಗಿ ಡಾ.ಶರಣಬಸಪ್ಪ ಕೋಲ್ಕಾರಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್‌.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಚಂದ್ರಯ್ಯ ಸೊಪ್ಪಿಮಠ, ಅಂಬಿಗರ ಮಂಜುನಾಥ, ಅಶೋಕ ಕುಕನೂರು, ಶಾಮಸುಂದರರಾವ್, ಟಿ.ನಿರಂಜನ, ಕೆ.ಚಂದ್ರಶೇಖರ, ಯು.ಎಂ.ವಿದ್ಯಾಶಂಕರ, ಬಿ.ಎಂ.ರುದ್ರಯ್ಯ, ಘನಮಠದಯ್ಯ ಹಿರೇಮಠ, ಎಸ್‌.ರಾಮಪ್ಪ, ತೆಂಗಿನಕಾಯಿ ತಿಪ್ಪೇಸ್ವಾಮಿ, ಕೆ.ಯಂಕಾರೆಡ್ಡಿ, ರಾಮಚಂದ್ರ ಚಿತ್ರಗಾರ ಇತರರಿದ್ದರು.