ನವರಸಗಳ ಜೀವಂತಿಕೆಯಿದೆ ಡಾ. ಸುಂಕಾಪೂರ ಸಾಹಿತ್ಯದಲ್ಲಿ: ರುದ್ರಣ್ಣ ಚಿಲುಮಿ

Dr. Navarasas are alive. In Sunkapura Literature: Rudranna Chilumi

ನವರಸಗಳ ಜೀವಂತಿಕೆಯಿದೆ ಡಾ. ಸುಂಕಾಪೂರ ಸಾಹಿತ್ಯದಲ್ಲಿ: ರುದ್ರಣ್ಣ ಚಿಲುಮಿ  

ಧಾರವಾಡ 11: ಡಾ. ಎಂ.ಎಸ್‌. ಸುಂಕಾಪೂರ ಸಾಹಿತ್ಯದಲ್ಲಿ ನವರಸಗಳ ಜೀವಂತಿಕೆ ಇದೆ. ಜಾನಪದ ರಂಗಭೂಮಿಗೆ  ಅವರು ಆಧಾರ ಸ್ತಂಭವಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ರುದ್ರಣ್ಣ ಚಿಲುಮಿ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ ಡಾ. ಎಂ. ಎಸ್‌. ಸುಂಕಾಪುರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಡಾ. ಎಂ.ಎಸ್‌. ಸುಂಕಾಪುರ ಅವರ ಜೀವನ-ಸಾಧನೆ’ ಕುರಿತು ಉಪನ್ಯಾಸ ನೀಡಿದರು. 

ಡಾ. ಎಂ. ಎಸ್‌. ಸುಂಕಾಪುರ ಕನ್ನಡ ಸಾಹಿತ್ಯ ಲೋಕದ ಹಾಸ್ಯ ಪ್ರಕಾರದ ಸಾಹಿತಿಗಳಲ್ಲೊಬ್ಬರು. ವಿದ್ಯಾರ್ಥಿ ದೆಸೆಯಲ್ಲಿಯೇ ಅವರಿಗೆ ಸಾಹಿತ್ಯ ರಚನೆಯ ಗೀಳು ಇತ್ತು. ಜಾನಪದ ನಾಟಕ ಕ್ಷೇತ್ರದಲ್ಲೂ ಅವರ ಕೃಷಿ ಮಾಡಿದ್ದಾರೆ. ಅವರು ಸಾಹಿತಿಗಳು ಮಾತ್ರವಲ್ಲ ಓರ್ವ ಶ್ರೇಷ್ಠ ನಟರೂ ಆಗಿದ್ದರು. ಪ್ರಾಧ್ಯಾಪಕರಾದ ಅವರು ಕಠಿಣ ವಿಷಯಗಳನ್ನು ಹಾಸ್ಯಭರಿತವಾಗಿ ಹೇಳುವ ಕಲೆ ಕರಗತ ಮಾಡಿಕೊಂಡಿದ್ದರು. ಅವರ ಹಾಸ್ಯ ಸಾಹಿತ್ಯ ಮೊನಚಾಗಿತ್ತು. ಸಮಾಜವನ್ನು ಹಾಸ್ಯದ ಮೂಲಕವೇ ತಿದ್ದುವ, ಜಾಗೃತಗೊಳಿಸುವ ಶಕ್ತಿ ಇತ್ತು.  

ಡಾ. ಎಂ. ಎಸ್‌. ಸುಂಕಾಪೂರ ಬಾಗಲಕೋಟ, ಬೆಳಗಾವಿಯಲ್ಲಿ ಅಧ್ಯಾಪಕರಾಗಿ, ಸೇವೆ ಸಲ್ಲಿಸಿ ಕ.ವಿ.ವಿ.ಯಲ್ಲಿ ಕನ್ನಡ ವಿಭಾಗದ ರೀಡರ್ ಆಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಕರ್ತವ್ಯ ಪ್ರಜ್ಞೆಯಿಂದ, ಬದ್ಧತೆಯಿಂದ ಕಾರ್ಯ ನಿರ್ವಹಿಸಿದರು. ಡಾ. ಆರ್‌.ಸಿ. ಹಿರೇಮಠರ ಅಂತರಂಗದ ಒಡನಾಡಿಗಳಾದ ಅವರು ಕ.ವಿ.ವಿ. ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ಅಹರ್ನಿಸಿ ಕಾರ್ಯ ಮಾಡಿದರು. ಗುಲ್ಬರ್ಗದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಿ ಅದರ ಮುಖ್ಯಸ್ಥರಾಗಿ ಶ್ರಮವಹಿಸಿ ಕಾರ್ಯ ಮಾಡಿದರು. ನಗೆ ಹೊಗೆ, ಜೀವನದಲ್ಲಿ ಹಾಸ್ಯ, ಜೀವನ ಜೋಕಾಲಿ, ಪ್ರಭುಲಿಂಗಲೀಲೆ, ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬ ಮೌಲಿಕ ಕೃತಿ ರಚನೆ ಸಂಪಾದನೆ ಮಾಡಿದ್ದಾರೆ.  

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಇಂಜನೀಯರ ಎಫ್‌. ಆಯ್‌. ಚನ್ನಪ್ಪಗೌಡರ ಮಾತನಾಡಿ, ಡಾ. ಎಂ.ಎಸ್‌. ಸುಂಕಾಪುರ ಸಹಜ ಮಾತುಗಳೇ ಹಾಸ್ಯಭರಿತವಾಗಿದ್ದವು. ಅವರದು ನಿರಾಡಂಬರದ ಸಾರ್ಥಕ ಬದುಕು ಎಂದು ಹೇಳಿದರು.  

ವೇದಿಕೆಯ ಮೇಲೆ ದತ್ತಿದಾನಿಗಳ ಪರವಾಗಿ  ಜಯಶ್ರೀ ಚನ್ನಪ್ಪಗೌಡರ ಇದ್ದರು.  

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಸಿದರು. ಶಂಕರ ಕುಂಬಿ ನಿರೂಪಿಸಿ, ವಂದಿಸಿದರು.  

ಶ್ರೀನಿವಾಸ ವಾಡಪ್ಪಿ, ಕೆ.ಎಂ. ಅಂಗಡಿ, ವ್ಹಿ.ಬಿ. ಸಂತೋಜಿ, ಸಿ.ಎಂ. ಕುಂದಗೋಳ, ಪುಷ್ಪಾ ಪಾಟೀಲ, ಗಿರಿಜಾ ನಿರ್ಲಿ, ಡಿ.ಬಿ. ನಿರ್ಲಿ, ಮಧುಮತಿ ಸಣಕಲ್, ಎಂ.ಎಸ್‌. ನರೇಗಲ್ ಸೇರಿದಂತೆ ಸುಂಕಾಪೂರ ಕುಟುಂಬದವರು ಇದ್ದರು.