ಡಾ.ಬಾಬು ಜಗಜೀವನ ರಾಂ ರಾಷ್ಟ್ರ ಭಕ್ತ ರಾಜಕಾರಣಿ: ಶಾಸಕ ಕೋನರಡ್ಡಿ

Dr. Babu Jagjivan Ram is a patriotic politician: MLA Konareddy

ಡಾ.ಬಾಬು ಜಗಜೀವನ ರಾಂ ರಾಷ್ಟ್ರ ಭಕ್ತ ರಾಜಕಾರಣಿ: ಶಾಸಕ ಕೋನರಡ್ಡಿ 

ಧಾರವಾಡ 06:  : ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರು ಈ ರಾಷ್ಟ್ರ ಕಂಡ ಧೀಮಂತ ನಾಯಕರು ಮತ್ತು ರಾಷ್ಟ್ರ ಭಕ್ತ ರಾಜಕಾರಣಿ, ರೈತನಾಯಕರಾಗಿದ್ದರು, ಯುದ್ಧ, ಆಹಾರ ಉತ್ಪಾದನೆಯಲ್ಲಿ ಅವರು ಕೈಗೊಂಡ ದಿಟ್ಟ ನಿರ್ಧಾರಗಳು ಬಲಿಷ್ಠ ಭಾರತವಾಗಲು ಸಾಧ್ಯವಾಯಿತು ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ಅವರು ಹೇಳಿದರು.  ಅವರು ಏ.5ರ ಬೆಳಿಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಜರುಗಿದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 118 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ನಾನು ಒಬ್ಬ ರೈತನಾಗಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಂ ಅವರನ್ನು ಹೆಮ್ಮೆಯಿಂದ ಸ್ಮರಿಸುತ್ತೇನೆ. ಗೋಧಿ ಬೆಳೆ ವಿಸ್ತರಿಸಿ, ವಿತರಿಸುವ ಮೂಲಕ ಭಾರತ ದೇಶವು ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಷ್ಟ್ರವಾಗಲೂ ಸಹಾಯ ಮಾಡಿದರು. ಬಲಿಷ್ಠ ಭಾರತ ನಿರ್ಮಾಣವಾಗಲು ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.  ಡಾ. ಬಾಬು ಜಗಜೀವನ ರಾಂ ಅವರು ಆದರ್ಶ ರಾಜಕಾರಣಿ ಅಷ್ಟೆ ಆಗಿರಲಿಲ್ಲ; ಅವರೊಬ್ಬ ರಾಷ್ಟ್ರಭಕ್ತ ರಾಜಕಾರಣಿ ಆಗಿದ್ದರು. ಸದಾ ಕಾಲ ಅವರು ದೇಶದ ಅಭಿವೃದ್ಧಿಪರ ನಿರ್ಧಾರ ಕೈಗೊಳ್ಳುತ್ತಿದ್ದರು ಎಂದು ಶಾಸಕರು ಹೇಳಿದರು. ಡಾ. ಬಿ. ಆರ್‌. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಎಲ್ಲ ಸರ್ವ ಧರ್ಮದವರು ಒಂದು ಎಂದು ಬದುಕುತ್ತಿರುವ ದೇಶ ಭಾರತ. ಈ ದೇಶದಲ್ಲಿ ಎಲ್ಲರೂ ಒಕ್ಕಟ್ಟಾಗಿ ಬದುಕುವುದಕ್ಕೆ ಒಂದು ದಾರಿ ದೀಪ ಹಾಕಿಕೊಟ್ಟವರು ಅಂಬೇಡ್ಕರ್ ಅವರು ಎಂದು ಅವರು ಹೇಳಿದರು.  ಯುದ್ಧ ನಡೆಯುವ ಸಂದರ್ಭದಲ್ಲಿ ಗಟ್ಟಿತನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಯಾರಿಗಾದರೂ ಇದೆ ಅಂದರೆ ಅದು ಡಾ. ಬಾಬು ಜಗಜೀವನ್ ರಾಂ ಅವರಿಗೆ ಮಾತ್ರ. ಇತಿಹಾಸವನ್ನು ನೋಡಿಕೊಂಡು ಹೋದಂತೆ ಅವರು ಮಾಡಿದ ಸಾಧನೆಗಳು ಏನೆಂದು ತಿಳಿಯುತ್ತವೆ. ಹಸಿರು ಕ್ರಾಂತಿ ಹರಿಕಾರ ಎಂದು ಯಾರಿಗಾದರೂ ಕರೆದಿದ್ದರೆ ಅದು ಡಾ. ಬಾಬು ಜಗಜೀವನ್ ರಾಂ ಅವರಿಗೆ ಮಾತ್ರ. ಬಡವರು ಉಪವಾಸ ಇರಬಾರದೆಂದು ಗೋಧಿ ಕೊಡುವ ಕಾರ್ಯಕ್ರಮವನ್ನು ಮಾಡಿದವರು. ನಾವು ಮಾಡುವ ಕಾರ್ಯದಲ್ಲಿ ಟೀಕೆ, ಟಿಪ್ಪಣಿಗಳು ಇದ್ದೇ ಇರುತ್ತವೆ. ಆದರೆ ನಾವು ಮಾಡುವ ಕಾರ್ಯವನ್ನು ಶ್ರದ್ದೆಯಿಂದ ಮಾಡಿದರೆ ಯಾರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ ಎಂದು ಶಾಸಕರು ಹೇಳಿದರು.  ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಡಾ. ಬಾಬು ಜಗಜೀವನ ರಾಂ ಅವರ ಬಾಲ್ಯದ ಜೀವನ ಗಮನಿಸಿದಾಗ ಅವರ ಸಮರ್ಥತೆ, ಸಮಾನತೆ ಚಿಂತನೆ, ಸಾತ್ವಿಕ ಪ್ರತಿಭಟನೆ ಕಾಣುತ್ತದೆ. ಬಾಲ್ಯದಿಂದಲೇ ಅವರಲ್ಲಿ ನಾಯಕತ್ವದ ಗುಣಗಳು ಬೆಳೆದಿದ್ದವು. ಹೀಗಾಗಿ ಅವರು ಭಾರತದ ರಾಜಕಾರಣದಲ್ಲಿ ಅಜಾತಶತ್ರು ಆಗಿದ್ದರು ಎಂದರು.  ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಅವರು ಧ್ವನಿ ಎತ್ತಿದ್ದರು. ರಾಜಕಾರಣ ಸೇರಿದಂತೆ ಸಮಾಜದಲ್ಲಿ ಅಪಾರ ಜನಬಲಗಳಿಸಿದ್ದರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  ವಿವಿಧ ಇಲಾಖೆಗಳ ವಸತಿನಿಲಯದ ವಿದ್ಯಾರ್ಥಿಗಳಿಗೆ ಡಾ.ಬಾಬು ಜಗಜೀವನ ರಾಂ ಅವರಂತಹ ನಾಯಕರ ಬಗ್ಗೆ ನಿರಂತರ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಹಳ್ಳಿಯ ಜಗದ್ಗುರು ಮರುಳಶಂಕರ ದೇವರಗುರು ಪೀಠದ ಸಿದ್ದ ಬಸವ ಕಬೀರ ಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಮಡಿವಂತಿಕೆ ಒಡೆದು ಹಾಕಿದವರು ದಾರ್ಶನಿಕರಾಗುತ್ತಾರೆ. ಜಾತಿ ವ್ಯವಸ್ಥೆ ನಾಶವಾಗಬೇಕು. ಸಮಾನತೆ, ಸಹಬಾಳ್ವೆಗೆ ಶಿಕ್ಷಣ, ಸಂವಿಧಾನ ಅವಕಾಶ ನೀಡಿವೆ. ಮೂಡನಂಬಿಕೆಗಳನ್ನು ನಂಬದೆ, ವಾಸ್ತವತೆ ಅರಿತು ಬದುಕಬೇಕು ಎಂದು ಹೇಳಿದರು. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ ಅವರು ಮಾತನಾಡಿ, ಮಹಾತ್ಮರ, ರಾಷ್ಟ್ರೀಯ ನಾಯಕರ ಜಯಂತಿ ದಿನದಂದು ನಾವು ಅವರಿಂದ ಏನು ಕಲಿಯುತ್ತೇವೆ, ಏನು ತಿಳಿಯುತ್ತೇವೆ, ಅದನ್ನು ಹೇಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂಬುದು ಅತಿ ಮುಖ್ಯವಾಗಿದೆ. ಡಾ. ಬಾಬು ಜಗಜೀವನ ರಾಂ ಅವರು ಸರಳ, ಸಜ್ಜನರಾಗಿ, ಸಮಾನತೆಗಾಗಿ ಹೋರಾಟ ಮಾಡಿದವರು. ನಾವು ಯಾರಿಗಿಂತ ಕಡಿಮೆ ಇಲ್ಲ. ನಮ್ಮಲ್ಲಿ ಅಗತ್ಯ ಶಕ್ತಿ, ಜ್ಞಾನವಿದ್ದರೆ ಯಾವುದೇ ಹಂತಕ್ಕಾದರೂ ಹೋಗಿ ತಲುಪಬಹುದು. ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಅವರು ತೆಗೆದುಕೊಂಡ ನಿರ್ಧಾರಗಳು ಅವರಿಂದ ನಾವು ಕಲಿಯಬೇಕು ಎಂದು ತಿಳಿಸಿದರು.  ಡಾ. ಬಾಬು ಜಗಜೀವನ ರಾಂ ಅವರು ಅಂತಹ ಕಷ್ಟದ ಸಮಯದಲ್ಲಿ ಓದಿ ಸಾಧನೆಯನ್ನು ಮಾಡಿದ್ದಾರೆ. ಇಂದಿನ ಮಕ್ಕಳು ಶ್ರಮಪಟ್ಟು ಓದಿದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ ಎಂದು ಅವರು ಹೇಳಿದರು.   ನರಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ಪವಿತ್ರಾ ಅವರು ಡಾ. ಬಾಬು ಜಗಜೀವನ ರಾಂ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಎಸ್‌.ಎಸ್‌.ಎಲ್‌.ಸಿ., ಪಿಯುಸಿ, ಪದವಿ ಹಾಗೂ ಸ್ನಾತಕೊತ್ತರ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.  ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ಅವರು ಸ್ವಾಗತಿಸಿದರು.  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ, ಡಿಸಿಪಿ ಮಹಾನಿಂಗ ನಂದಗಾವಿ, ಸಮಾಜದ ಮುಖಂಡರಾದ ಅಶೋಕ ಬಂಡಾರಿ, ಎಂ ಅರವಿಂದ, ಸಂತೋಷ ಸವಣೂರ, ವೆಂಕಟೇಶ ಸಗ್ಗಬಾಲ, ಲಕ್ಷ್ಮಣ ಬಕಾಯಿ, ಜಿಲ್ಲಾ ಹಾಗೂ ಉಪ ವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಜಿಲ್ಲಾ ಮಟ್ಟದ ಹಾಗೂ ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿ ಜಾಗೃತಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕಿ ಎಂ.ಬಿ.ಸನ್ನೆರ ವಂದಿಸಿದರು.  ಕಾರ್ಯಕ್ರಮದಲ್ಲಿ ಸಮುದಾಯದ ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಭವ್ಯ ಮೆರವಣಿಗೆ: ಡಾ.ಬಾಬು ಜಗಜೀವನ ರಾಂ ಅವರ 118 ನೇ ಜಯಂತಿ ನಿಮಿತ್ತ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.  ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಅಧೀಕಕ್ಷ ಡಾ. ಗೋಪಾಲ ಎಂ.ಬ್ಯಾಕೋಡ ಮತ್ತು ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಸಮಾಜ ಮುಖಂಡರು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.  ವಿವಿಧ ಕಲಾತಂಡಗಳೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಭಾವಚಿತ್ರದ ಮೆರವಣಿಗೆ ಸಂಚರಿಸಿ, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮುಕ್ತಾಯವಾಯಿತು.  ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರೆ​‍್ಣ ಮಾಡಿದರು.