ಕೊಪ್ಪಳ ಗವಿಮಠಕ್ಕೆ 41 ಕ್ವಿಂಟಲ್ ಅಕ್ಕಿ ದೇಣಿಗೆ
ಕಂಪ್ಲಿ 02: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದ ಹಾಗೂ ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರಾದ ಕೊಪ್ಪಳದ ಗವಿಮಠಕ್ಕೆ ಕಂಪ್ಲಿಯ ಅಕ್ಕಿ ಗಿರಣಿ ಮಾಲೀಕರು ಮತ್ತು ಅಕ್ಕಿ ವ್ಯಾಪಾರಸ್ಥರು 41 ಕ್ವಿಂಟಲ್ ಅಕ್ಕಿಯನ್ನು ದೇಣಿಗೆಯಾಗಿ ನೀಡಿದರು. ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕಂಪ್ಲಿ ತಾಲ್ಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ತ್ರಿವಿಧ ದಾಸೋಹಕ್ಕೆ ಇಡೀ ದೇಶಕ್ಕೆ ಕೊಪ್ಪಳ ಗವಿಮಠ ಹೆಸರಾಗಿದೆ. ಜೊತೆಗೆ ದಕ್ಷಿಣದ ಕುಂಭಮೇಳವೆಂದೇ ಖ್ಯಾತಿಯಾದ ಕೊಪ್ಪಳ ಗವಿಮಠದ ಜಾತ್ರೆಗೆ ಪ್ರತಿದಿನ ಲಕ್ಷಾಂತರ ಜನ ಆಗಮಿಸುತ್ತಾರೆ. ಲಕ್ಷಾಂತರ ಜನರಿಗೂ ಕಡಿಮೆ ಇಲ್ಲದಂತೆ ಹಗಲಿರುಳು ಪ್ರಸಾದ ವಿತರಣೆ ಮಾಡುವ ಮೂಲಕ ದೇಶದಲ್ಲಿಯೇ ಮಾದರಿ ಮಠವಾಗಿದೆ. ಜೊತೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಅಕ್ಷರ, ಅನ್ನ, ವಸತಿ ನೀಡುತ್ತಿದ್ದಾರೆ. ಇಂತಹ ಮಠಕ್ಕೆ ನಮ್ಮಲ್ಲಿ ಬೆಳೆದಿರುವ ಅಕ್ಕಿಯನ್ನು ನೀಡುವ ಮೂಲಕ ನಮ್ಮದು ಅಳಿಲು ಸೇವೆಯನ್ನು ಸಲ್ಲಿಸುತ್ತಿದಗದೇವೆ ಎಂದರು. ನಂತರ 41 ಕ್ವಿಂಟಲ್ ಅಕ್ಕಿಯನ್ನು ವಾಹನದ ಮೂಲಕ ಕೊಪ್ಪಳ ಗವಿಮಠಕ್ಕೆ ಕಳುಹಿಸಿಕೊಟ್ಟರು.ಈ ಸಂದರ್ಭದಲ್ಲಿ ಕಂಪ್ಲಿ ತಾಲ್ಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು, ಕಂಪ್ಲಿ ತಾಲ್ಲೂಕು ಅಕ್ಕಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಇದ್ದರು. ಫೆ.002: ಕಂಪ್ಲಿ ತಾಲ್ಲೂಕು ಅಕ್ಕಿ ಗಿರಣಿ ಮಾಲೀಕರ ಸಂಘ ಹಾಗೂ ಅಕ್ಕಿ ವ್ಯಾಪಾರಸ್ಥರ ಸಂಘದಿಂದ ಕೊಪ್ಪಳ ಗವಿಮಠಕ್ಕೆ 41 ಕ್ವಿಂಟಲ್ ಅಕ್ಕಿಯನ್ನು ದೇಣಿಗೆ ನೀಡಿದರು.