3ತಿಂಗಳು ಕಳೆದರು ಬಿಲ್ ಸಂದಾಯ ಮಾಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷ ಹಿರೇಮಠ ಆಗ್ರಹ
ಬೀಳಗಿ, 03; ಕಬ್ಬು ನಿಯಂತ್ರಣ ಆದೇಶದನ್ವಯ ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನದೊಳಗಾಗಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಲೆಯನ್ನು ಸಂದಾಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ರೈತರ ಮನವಿಗೆ ಸ್ಪಂದಿಸಿ ಆದೇಶ ಹೊರಡಿಸಿದ್ದರು. ಇದನ್ನು ತಿರಸ್ಕರಿಸಿ 3ತಿಂಗಳು ಕಳೆದರು ಬಿಲ್ ಸಂದಾಯ ಮಾಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಸಕ್ಕರೆ ಕಾರ್ಖಾನೆ ಮಾಲಿಕರ ಮತ್ತು ಆಡಳಿತ ಮಂಡಳಿಯ ಮೇಲೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷ ಹಿರೇಮಠ ಹರಿಹಾಯ್ದಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಇವರು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಮತ್ತು ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿಗಳು ಇಗಾಗಲೇ ಸೂಚಿಸಿದಂತೆ ರೈತರ ಕಬ್ಬಿನ ಬಿಲ್ 15 ದಿನದೊಳಗಾಗಿ ಪೂರೈಸಬೇಕು ಹಾಗೂ ಒಂದೇ ದರ ನೀಡಬೇಕು, ತಪ್ಪಿದಲ್ಲಿ ವಿಳಂಬಿತ ಅವಧಿಗೆ ವಾರ್ಷಿಕ ಶೇಕಡಾ 15ರಷ್ಟು ಬಡ್ಡಿಯನ್ನು ರೈತರಿಗೆ ಸಂದಾಯ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಇವರ ಆದೇಶಕ್ಕೆ ಮನ್ನಣೆ ನೀಡದೆ ಮತ್ತೇ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವುದು ರೈತ ಸಂಘವು ಸಹಿಸುವುದಿಲ್ಲ. ಶೀಘ್ರವಾಗಿ ರೈತರಿಗೆ ಕಬ್ಬಿನ ಬಿಲ್ ನೀಡಬೇಕು. ಸಾಲ-ಸೂಲ ಮಾಡಿ ರೈತರು ಕಬ್ಬು ಬೆಳೆದು ಕಷ್ಟದಲ್ಲಿ ಸಿಲುಕಿ ನೋವು ಅನುಭವಿಸುತ್ತಿರುತ್ತಾರೆ. ಸಂಸಾರ, ಮಕ್ಕಳ ಶಾಲೆ, ಮದುವೆ ಸೇರಿದಂತೆ ಕಷ್ಟದ ಜಂಜಾಟದಲ್ಲಿ ರೈತರು ಬಳಲುತ್ತಿರುತ್ತಾರೆ. ಸಕ್ಕರೆ ಕಾರ್ಖಾನೆ ಮಾಲಿಕರು ಮತ್ತು ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳು ಹೇಳಿದಂತೆ ಕಬ್ಬಿನ ಬಿಲ್ ಸಂದಾಯ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ರೈತರು ಸಾಮೂಹಿಕವಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.