ಸಾಮಾಜಿಕ ಆರ್ಥಿಕ ಗಣತಿ ಜಾರಿಗೆ ಜಿಲ್ಲಾ ಜನಪರ ಸಂಘಟನೆ ಆಗ್ರಹ

District People's Organization demands implementation of socio-economic census

ಸಾಮಾಜಿಕ ಆರ್ಥಿಕ ಗಣತಿ ಜಾರಿಗೆ ಜಿಲ್ಲಾ ಜನಪರ ಸಂಘಟನೆ ಆಗ್ರಹ  

ಕಾರವಾರ, 19 : ಮುಖ್ಯಮಂತ್ರಿ ಸಿದ್ದರಾಮಯ್ಯಸಚಿವ ಸಂಪುಟದಲ್ಲಿ ಮಂಡನೆಯಾದ 'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015'ರ ದತ್ತಾಂಶ ಅಧ್ಯಯನ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸುವಂತೆ ಉತ್ತರ ಕನ್ನಡ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ನಾಗೇಶ ನಾಯ್ಕ ಆಗ್ರಹಿಸಿದರು.  

ಕಾರವಾರದ ಸರ್ಕಾರಿ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ, ಈ ವರದಿಯು ಸರ್ಕಾರಕ್ಕೆ ಸಲ್ಲಿಸಲ್ಪಟ್ಟಿದ್ದು, ಇತ್ತೀಚೆಗೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಿದೆ. ಆದರೆ, ಈ ವರದಿಯ ಬಗ್ಗೆ ಸಾರ್ವಜನಿಕ ಮತ್ತು ರಾಜಕೀಯ ವಲಯಗಳಲ್ಲಿ ವಿವಾದಗಳು ಉದ್ಭವಿಸಿವೆ. ಕೆಲವರು ಇದನ್ನು ಅವೈಜ್ಞಾನಿಕವೆಂದು ಟೀಕಿಸಿದರೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದು ಸಮಾಜದಲ್ಲಿ ದ್ವೇಷವನ್ನು ಹರಡುವ ಉದ್ದೇಶಪೂರ್ವಕ ಪ್ರಯತ್ನವೆಂದು, ಕುರ್ಚಿ ಉಳಿಸಿಕೊಳ್ಳುವ ಉದ್ದೇಶದಿಂದ ಕೂಡಿದೆ ಆರೋಪಿಸಿದ್ದಾರೆ. ಇದು ಸಂಸದರು ಹಿಂದುಳಿದ ವರ್ಗಗಳ ಬಗ್ಗೆ ಅಸಹನೆ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ವಿವಿಧ ಜಾತಿಗಳ ಸಮುದಾಯದ ಅಭಿವೃದ್ಧಿಗೆ ನೆರವಾಗುವ ದತ್ತಾಂಶ ಸಿಕ್ಕು, ಮೀಸಲಾತಿ ಹೆಚ್ಚಳವಾಗಲಿದೆ ಎಂಬ ದುಃಸ್ವಪ್ನ ಕಾಗೇರಿಗೆ ಬಿದ್ದಂತೆ ಕಾಣುತ್ತಿದೆ. ಆಧಾರ ರಹಿತ ಆರೋಪ ಮಾಡುವುದನ್ನು ಜವಾಬ್ದಾರಿ ಸ್ಥಾನದಲ್ಲಿರುವ ಸಂಸದ ವಿಶ್ವೇಶ್ವರ ಹೆಗಡೆ ಬಿಡಬೇಕು ಎಂದು ನಾಗೇಶ್ ನಾಯ್ಕ ಆಗ್ರಹಿಸಿದರು. ಸರಿಯಾದ ಆಧಾರವಿಲ್ಲದೆ, ರಾಜಕೀಯ ಕಾರಣಕ್ಕೆ ದೂರಬಾರದು. ಇದು ಸರಿಯಲ್ಲ ಎಂದು ಜನಪರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿತು. 

ಈ ವರದಿಯನ್ನು ಮನೆ-ಮನೆಗೆ ತೆರಳಿ ಶೇ. 95 ಜನರನ್ನು ಸಂದರ್ಶಿಸಿ, ಸಮೀಕ್ಷೆ ಮಾಡಿ, 52 ವಿವಿಧ ಮಾನದಂಡಗಳ ಆಧಾರದ ಮೇಲೆ ರೂಪಿಸಲಾಗಿದೆ. ಹಿಂದಿನ ಮಿಲ್ಲರ್ ಮತ್ತು ಚೆನ್ನಪ್ಪ ರೆಡ್ಡಿ ಆಯೋಗಗಳು ಮಾದರಿ ಅಧಾರಿತ ಸಮೀಕ್ಷೆಗಳನ್ನು ನಡೆಸಿದರೆ, ಈ ಬಾರಿ ವ್ಯಾಪಕ ಮತ್ತು ವೈಜ್ಞಾನಿಕ ವಿಧಾನವನ್ನು ಅನುಸರಿಸಲಾಗಿದೆ. ಈ ವರದಿಯನ್ನು ಸಾರ್ವಜನಿಕವಾಗಿ ವಿವರಿಸಿ, ವಿಧಾನಸಭೆ ಮತ್ತು ಪರಿಷತ್ನಲ್ಲಿ ಚರ್ಚೆಗೆ ತೆರೆದು, ಅಂತಿಮವಾಗಿ ಅಂಗೀಕರಿಸಿ ಜಾರಿಗೊಳಿಸುವಂತೆ ರಾಜ್ಯಪಾಲರಿಗೆ ಒಕ್ಕೂಟವು ವಿನಂತಿಸಿದೆ.  

ಈ ಪ್ರಕ್ರಿಯೆಯನ್ನು ತಡೆಹಿಡಿಯಲು ಕೆಲವರು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದ್ದು, ಇದಕ್ಕೆ ಖಂಡನೆ ವ್ಯಕ್ತಪಡಿಸಿದೆ. ಈ ವರದಿ ಜಾರಿಗೆ ಬಂದರೆ, ಮೀಸಲಾತಿ ಪ್ರಮಾಣ ಶೇ. 32 ರಿಂದ ಶೇ. 51 ಏರಿಕೆಯಾಗಬಹುದು ಎಂದು ನೀರೀಕ್ಷಿಸಲಾಗಿದೆ. ಇದು ವಂಚಿತ ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದರೊಂದಿಗೆ, ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತದೆ ಎಂದು ಒಕ್ಕೂಟವು ನಂಬಿದೆ ಎಂದರು. ಈ ಬೇಡಿಕೆಯ ಮನವಿಯನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮೂಲಕ ರಾಜ್ಯಪಾಲರಿಗೆ ಜನಪರ ಸಂಘಟನೆ ಪದಾಧಿಕಾರಿಗಳು ಕಳುಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನೇಶ್ವರ ನಾಯ್ಕ ಕೋಲಸಿರ್ಸಿ, ಇತರರು ಉಪಸ್ಥಿತರಿದ್ದರು.