ಜಿಲ್ಲಾಮಟ್ಟದ ಮತದಾರ ಜಾಗೃತಿ ಸ್ಪರ್ಧೆ- ರಾಜ್ಯ ಮಟ್ಟಕ್ಕೆ ಆಯ್ಕೆ
ವಿಜಯಪುರ 13: " ಉತ್ತಮ ನಾಗರಿಕನಾಗಿ ಸುಭದ್ರ ಸರಕಾರದ ರಚನೆಗಾಗಿ ಇಂದಿನ ಯುವಕರಿಗೆ ತರಬೇತಿ ಅಗತ್ಯ. ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ಪ್ರಜಾಪ್ರಭುತ್ವದ ತಳಹದಿಯಾಗಿವೆ. ಪ್ರಜಾಪಭುತ್ವ ಯಶಶ್ವಿಯಾಗಬೇಕಾದರೆ ಪ್ರಬುದ್ದ ಹಾಗೂ ಜಾಗರೂಕ ಮತದಾರರಿಂದಲೇ ಸಾಧ್ಯ, ಮತದ ಮಹತ್ವ ತಿಳಿಸಲು ಪ್ರೌಢ ಹಾಗೂ ಪದವಿ ಪೂರ್ವ ಹಂತದಿಂದಲೇ ತರಬೇತಿ ನೀಡಬೇಕು. ಇಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ತರಹದ ಅನೇಕ ಸ್ಫರ್ದೆ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಎಸ್.ಕೆ. ರಾಠೋಡ ಅಭಿಪ್ರಾಯಪಟ್ಟರು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವುಗಳ ಸಂಯುಕ್ತ ಆಶ್ರಯದಲ್ಲಿ ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜಿನ ಶಾರದಾ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡುತ್ತ “ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಯಶಶ್ವಿ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ, ಇದನ್ನು ಮುಂದುವರಿಸಲು 18 ವರ್ಷ ತುಂಬಿದ ತಕ್ಷಣ ಎಲ್ಲ ಯುವಕ, ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಮತ ಚಲಾಯಿಸಬೇಕು. ಹಾಗೂ ಇತರರಿಗೆ ಮತ ಚಲಾಯಿಸುವಂತೆ ಪ್ರೇರಣೆ ನೀಡಬೇಕು” ಎಂದು ಕರೆ ನೀಡಿದರು.
ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಇ.ಎಲ್.ಸಿ. ನೋಡಲ್ ಅಧಿಕಾರಿಗಳಾದ ಪ್ರೊ.ಎಂ.ಬಿ.ರಜಪೂತ ಪ್ರಾಸ್ತಾವಿಕ ಮಾತನಾಡಿ “ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನವೇ ಕಾರಣ, ಮತದಾನ ಮಾಡದೇ ಕೇವಲ ಜನಪ್ರತಿನಿಧಿಗಳ ಟೀಕೆ ಮಾಡುವುದು ಸರಿಯಲ್ಲ, ಒಂದು ಮತ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಒಂದೇ ಮತದಲ್ಲಿ ಸರ್ಕಾರಗಳೇ ಬದಲಾಗುವ ಸಾಧ್ಯತೆ ಇರುತ್ತದೆ. ನನ್ನದೊಂದು ಮತದಿಂದ ಏನಾಗುತ್ತದೆ ಎಂಬ ತಾತ್ಸಾರ ಮನೋಭಾವ ಬಿಟ್ಟು ಎಲ್ಲರೂ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ.” “ಬಂದೂಕಿನ ಬುಲೆಟ್ಟಿಗಿಂತ ಬ್ಯಾಲೆಟ್ (ಮತ) ಅತ್ಯಂತ ಶಕ್ತಿಶಾಲಿ” ಎಂದು ಮತದ ಮಹತ್ವನ್ನು ವಿವರಿಸಿದರು.
ಪ್ರಾಚಾರ್ಯರಾದ ಸಿ.ಬಿ.ನಾಟೀಕಾರ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರಸ್ತುತ ಸಂಕೀರ್ಣವಾದ ವಿಶ್ವದಲ್ಲಿ ಉತ್ತಮ ಸರಕಾರ ರಚನೆಯಾದರೆ ಮಾತ್ರ ಪ್ರಗತಿ ಸಾಧ್ಯ. ಹಾಗಾಗಿ ಪೌರರಿಗೆ ಮಾಹಿತಿ ನೀಡಲು ಇಂತಹ ಕಾರ್ಯಕ್ರಮಗಳು ಕಾಲೇಜು ಹಂತದಲ್ಲಿ ನಡೇಯಲೇಬೇಕು. ಪ್ರತಿಯೊಬ್ಬರು ಫಾರ‌್ಮ-6ನ್ನು ತುಂಬಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಎಂದು ಸಲಹೆ ನೀಡಿದರು.
ವಿಜಯಪುರ ಜಿಲ್ಲಾ ಮಟ್ಟದ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕು,ಸೋನು.ಕೆಂಗಾರ (ಕನ್ನಡ), ಕು.ಅಕ್ಷತಾ.ಪೂಜಾರಿ (ಇಂಗ್ಲೀಷ್), ಕು.ಲಕ್ಷ್ಮೀ.ಕೋರಿ.(ಭೀತ್ತಿಚಿತ್ರ), ಕು.ವಿನೂತಾ.ಮೋರೆ (ರಸಪ್ರಶ್ನೆ), ಕು.ಭಾಗ್ಯ.ಅಲಕೋಪರ (ರಸಪ್ರಶ್ನೆ) ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ವೇದಿಕೆಯ ಮೇಲೆ ತಾಲೂಕಾ ಇ.ಎಲ್.ಸಿ ನೋಡಲ್ ಅಧಿಕಾರಿಗಳಾದ ಕೆ.ಎ.ಹೊಸಟ್ಟಿ, ಟಿ.ಬಿ.ಕಾರದಾನಿ, ಪ್ರೊ.ಪಿ.ಜಿ.ಘಿರಡಿ, ಮಂಜುಳಾ.ಪೂಜಾರ, ವಿಜಯಲಕ್ಷ್ಮೀ ಹಿರೇಮಠ, ರುಕ್ಸಾನಾ, ಪ್ರೊ. ಸಿದ್ದಪ್ಪ.ತಳ್ಳಿ, ಬಸವರಾಜ.ಪವಾರ. ಪ್ರತಿಭಾ ಓತಗೇರಿ ಉಪಸ್ಥಿತರಿದ್ದರು.
ಪ್ರೊ. ಎನ್.ಬಿ,ಪೂಜಾರಿ ಸ್ವಾಗತಿಸಿದರು, ಪ್ರೊ. ಮಲ್ಲಮ್ಮ. ಮಾಲಿಪಾಟೀಲ ವಂದಿಸಿದರು, ಪ್ರೊ. ಎಸ್.ಸಿ. ತೋಳನೂರ ನಿರೂಪಿಸಿದರು.