ಬಮ್ಮಿಗಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ
ಧಾರವಾಡ 31: ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕರ ದೂರುಗಳ ಹಿನ್ನಲೆಯಲ್ಲಿ ನಿನ್ನೆ (ಜ.30) ಮಧ್ಯಾಹ್ನ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ ಅವರು ದೀಡಿರ್ ಭೇಟಿ ನೀಡಿ, ಪರೀಶೀಲನೆ ಮಾಡಿದರು.
ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಹಾಗೂ ಎಲ್ಲ ಸಿಬ್ಬಂದಿಗಳ ಸಭೆಯನ್ನು ಜರುಗಿಸಿ, ನಿಯಮಾನುಸಾರ ಕರ್ತವ್ಯ ನಿರ್ವಹಿಸುವಂತೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದರು. ನಂತರ ಬಮ್ಮಿಗಟ್ಟಿ ಗ್ರಾಮದ ಗ್ರಾಮಸ್ಥರ, ಚುನಾಯಿತ ಪ್ರತಿನಿಧಿಗಳ ಹಾಗೂ ಜನ ಪ್ರತಿನಿಧಿಗಳ ಕುಂದು ಕೊರತೆ ಸಭೆಯನ್ನು ಜರುಗಿಸಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸಭೆಯಲ್ಲಿ ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಸರಿಯಾಗಿ ಆಗಮಿಸುವಂತೆ, ಆಸ್ಪತ್ರೆ ಮತ್ತು ಆಸ್ಪತ್ರೆಯ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ, ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ಕಾಲಕಾಲಕ್ಕೆ ಜರುಗಿಸುವಂತೆ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಡಿಎಚ್‌ಓ ಡಾ. ಶಶಿ ಪಾಟೀಲ ಅವರು ಸೂಚನೆ ನೀಡಿದರು.ಸಭೆಯಲ್ಲಿ ಗ್ರಾಮಪಂಚಾಯತ ಅಧ್ಯಕ್ಷ ಮಂಜುನಾಥ ದೂಳಿಕೊಪ್ಪ ಹಾಗೂ ಅಶೋಕ ಕಂದುನವರ, ಜಗದೀಶ ಮೆಣಸಿನಕಾಯಿ, ಶ್ರೀಶೈಲ, ಮಲ್ಲೇಶಪ್ಪಾ ಅಕ್ಕಿ ಮತ್ತು ಗ್ರಾಮಸ್ಥರು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.