ಯೋಜನೆ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸಿ

District Collector Prashant Kumar Mishra ordered to create awareness to prevent child marriage in t


 ಯೋಜನೆ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸಿ 

ಬಳ್ಳಾರಿ 08:ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುವ ಸಮುದಾಯಗಳಲ್ಲಿ ಅದರಿಂದಾಗುವ ದುಷ್ಪರಿಣಾಮ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.  

ಬುಧವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಮತ್ತು ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಾಗ ಅಧಿಕಾರಿಗಳು ಪೊಲೀಸರು ಹಾಗೂ ಇತರೆ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಬಾಲ್ಯ ವಿವಾಹ ತಡೆಗಟ್ಟಬೇಕು. ಈ ಕುರಿತು ಅಧಿಕಾರಿಗಳು ಸಮನ್ವತೆ ಸಾಧಿಸಬೇಕು ಎಂದು ಅವರು ತಿಳಿಸಿದರು. 

ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕು. ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ, ಪೊಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮತ್ತಿತರ ವಿಷಯಗಳ ಬಗ್ಗೆ ತಿಳಿಸಬೇಕು ಎಂದರು. 

ಶಾಲೆಯಲ್ಲಿ ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಹೇಗೆ ತಡೆಗಟ್ಟಬಹುದು. ಬ್ಯಾಡ್ ಟಚ್ ಅಂದರೇನು? ಗುಡ್ ಟಚ್ ಅಂದರೇನು? ಯಾರಾದಾರೂ ಬ್ಯಾಡ್ ಟಚ್ ಮಾಡಿದರೆ ಅದನ್ನು ಹೇಗೆ ಗುರುತಿಸಬೇಕು. ಅವುಗಳನ್ನು ತಡೆಗಟ್ಟಲು ಮಕ್ಕಳು ಏನು ಮಾಡಬೇಕು ಎಂಬುದರ ಮಾಹಿತಿ ಮಕ್ಕಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಡಿಡಿಪಿಐ ಅಧಿಕಾರಿಗಳಿಗೆ ತಿಳಿಸಿದರು.  

ಪೋಷಕರು ಇಲ್ಲದ ಮಕ್ಕಳನ್ನು ಗುರುತಿಸಿ, ಸರ್ಕಾರಿ ಬಾಲ ಮಂದಿರದಲ್ಲಿ ದಾಖಲಾತಿ ಪಡೆದುಕೊಳ್ಳಬೇಕು. ಅಂತಹ ಮಕ್ಕಳು ಕಂಡುಬಂದಲ್ಲಿ ಸರ್ಕಾರಿ ಬಾಲ ಮಂದಿರಕ್ಕೆ ನೋಂದಾಯಿಸಲು ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. 

ದೈಹಿಕ ಹಾಗೂ ಮಾನಸಿಕವಾಗಿ ಕೌಟುಂಬಿಕ ಹಿಂಸೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ  ಮಹಿಳಾ ಸಂರಕ್ಷಣೆ ಅಧಿನಿಯಮ 2005 ಕಾಯ್ದೆ ಜಾರಿಯಲ್ಲಿದ್ದು, ಈ ಕಾಯ್ದೆ ಕುರಿತು ಗ್ರಾಮಾಂತರ ಪ್ರದೇಶದವರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದರು. 

ಶೋಷಣೆಗೆ ಒಳಗಾಗುವ ಮಹಿಳೆಯರ ಸಮಸ್ಯೆಗಳನ್ನು ಕೌನ್ಸಲಿಂಗ್ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದ ಅವರು, ಈ ಕಾಯ್ದೆ ಬಗ್ಗೆ ಗ್ರಾಮಾಂತರ ಪ್ರದೇಶದ ಮಹಿಳೆಯರಲ್ಲಿ ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಸಹಕಾರ ಪಡೆಯಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್‌.ಹೊಸಮನೆ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಎನ್‌ಜಿಓ ಸಂಸ್ಥೆಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.