ಪರೀಕ್ಷಾ ಭಯ, ಒತ್ತಡ, ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆಗಳನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು

District Collector Divya Prabhu encouraged the students to write the exams without fear, stress and

ಪರೀಕ್ಷಾ ಭಯ, ಒತ್ತಡ, ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆಗಳನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು 

ಧಾರವಾಡ 14: ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ಗಣನೀಯ ಸಾಧನೆ ಮಾಡಬೇಕು ಮತ್ತು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಮಿಷನ್ ವಿದ್ಯಾಕಾಶಿ ಎಂಬ ಹೆಸರಿನಡಿ ಧಾರವಾಡ ಜಿಲ್ಲಾಡಳಿತದಿಂದ  ಕಾರ್ಯಕ್ರಮ ರೂಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯ ಮಕ್ಕಳು ಉತ್ತಮ ಫಲಿತಾಂಶ ಪಡೆದು ರಾಜ್ಯದಲ್ಲಿ ಧಾರವಾಡ ಜಿಲ್ಲೆ ಟಾಪ್ 10ರ ಪಟ್ಟಿಯಲ್ಲಿ ಬರಬೇಕು, ಕಲಿಕಾ ಗುಣಮಟ್ಟ ಸುಧಾರಿಸಿ ಆ ಮೂಲಕ ವಿದ್ಯಾಕಾಶಿ ಎಂಬ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಉದ್ದೇಶ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯ ಈ ಮಿಷನ್ ವಿದ್ಯಾಕಾಶಿಯದ್ದಾಗಿದೆ. ಇನ್ನೇನು ಮಾರ್ಚ್‌ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿವೆ. ಪರೀಕ್ಷೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ವತಃ ಧಾರವಾಡ ಜಿಲ್ಲೆಯ ವಿವಿಧ ಹೈಸ್ಕೂಲ್‌ಗಳಿಗೆ ಭೇಟಿ ನೀಡಿ, ಎಸ್‌ಎಸ್‌ಎಲ್‌ಸಿ  ಮಕ್ಕಳೊಂದಿಗಷ್ಟೇ ಅಲ್ಲದೇ ಪಾಲಕರ ಜೊತೆಯೂ ಸಂವಾದ ಮಾಡುತ್ತಿದ್ದಾರೆ.  ಇಂದು (ಫೆ.14) ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್‌ಗೆ ಭೇಟಿ ನೀಡಿದ ಡಿಸಿ ದಿವ್ಯ ಪ್ರಭು, ಎಸ್‌ಎಸ್‌ಎಲ್‌ಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅನೇಕ ಮಕ್ಕಳು ತಮಗಿರುವ ಸಂದೇಹಗಳನ್ನು ಡಿಸಿ ಅವರಿಗೆ ಕೇಳಿ ಬಗೆಹರಿಸಿಕೊಂಡಿದ್ದು ವಿಶೇಷವಾಗಿತ್ತು. ಜಿಲ್ಲಾಧಿಕಾರಿಗಳು ಮಕ್ಕಳಿಗೆ, ಪರೀಕ್ಷೆ ಹೇಗೆ ಎದುರಿಸಬೇಕು? ಅದಕ್ಕೆ ತಯಾರಿ ಹೇಗೆ ಮಾಡಿಕೊಳ್ಳಬೇಕು? ಎಂಬ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.   ಜೀವನದಲ್ಲಿ ಉನ್ನತ ಗುರಿ ಇರಬೇಕು. ಪ್ರತಿದಿನ ವೇಳಾಪಟ್ಟಿ ಅನುಸಾರ ಅಭ್ಯಾಸ ಮಾಡಬೇಕು. ಕಠಿಣ ಎನಿಸುವ ವಿಷಯಗಳನ್ನು ಮೊದಲು ಓದಬೇಕು. ಒತ್ತಡಕ್ಕೆ, ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ರೂಢಿ ಪರೀಕ್ಷೆಗಳನ್ನು ಬರೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ದೂರವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಎಲ್ಲ ಮಕ್ಕಳು ಕಷ್ಟಪಟ್ಟು ಪ್ರಾಮಾಣಿಕತೆಯಿಂದ ನಿರಂತರವಾಗಿ ಓದಿ, ತಮ್ಮಂತೆ ಜಿಲ್ಲಾಧಿಕಾರಿ ಆಗಬೇಕು. ಐಎಎಸ್, ಐಪಿಎಸ್ ಹುದ್ದೆಗಳಿಗೆ ಆಯ್ಕೆ ಆಗಬೇಕು. ಅಂತಹ ಕನಸು, ಛಲ ಈಗಿನಿಂದಲೇ ಬೆಳಿಸಿಕೊಳ್ಳಬೇಕು. ತಾವು ಸಹ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ನಮ್ಮ ರಾಜ್ಯಕ್ಕೆ ರಾ​‍್ಯಂಕ್ ಬಂದಿದ್ದೆ, ನಂತರ ಡಿಸಿ ಆಗಿರುವೆ. ನೀವು ರಾಜ್ಯಕ್ಕೆ ಉತ್ತಮ ರಾ​‍್ಯಂಕ್ ಪಡೆದು, ಒಳ್ಳೆಯ ಅಧಿಕಾರಿ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.  

ಅಲ್ಲದೇ ಎಸ್‌.ಡಿ.ಎಂ.ಸಿ ಸದಸ್ಯರೊಂದಿಗೆ ಮತ್ತು ಪಾಲಕರೊಂದಿಗೂ ಜಿಲ್ಲಾಧಿಕಾರಿಗಳು ಸಂವಾದ ನಡೆಸಿದರು. ಮಕ್ಕಳ ಮೇಲೆ ಯಾವ ರೀತಿ ನಿಗಾ ವಹಿಸಬೇಕು? ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೇಗಿದೆ? ಎಂಬ ಎಲ್ಲಾ ವಿಷಯಗಳನ್ನು ಪಾಲಕರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು. 

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಹತ್ತಿರ ಬಂದಿದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಚನ್ನಾಗಿ ಓದುವ ವಾತಾವರಣ ಕಲ್ಪಿಸಬೇಕು. ಟಿ.ವಿ, ಮೊಬೈಲ್‌ಗಳಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು. ಪಾಲಕರೂ ಸಹ ಮನೆಯಲ್ಲಿ ಟಿ.ವಿ, ಮೊಬೈಲ್‌ಗಳನ್ನು ಅಗತ್ಯವಿರುವಷ್ಟು ಮಾತ್ರ ಬಳಸಿ, ಮಕ್ಕಳ ಓದಿನ ಕಡೆಗೆ ಗಮನ ಹರಿಸಬೇಕು ಎಂದರು. 

ಪುಡಕಲಕಟ್ಟಿ, ಕರಡಿಗುಡ್ಡ, ಯಾದವಾಡ ಮತ್ತು ಉಪ್ಪಿನಬೇಟಗೇರಿಯ ವಿವಿಧ  ಪ್ರೌಢಶಾಲೆಯ ಶಿಕ್ಷಕರು ತಮ್ಮ ಶಾಲಾ ಮಕ್ಕಳ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ತಹಶಿಲ್ದಾರ ಡಾ.ಡಿ.ಎಚ್‌.ಹೂಗಾರ, ತಾಲೂಕು ಆರೋಗ್ಯ ಅಧಿಕಾರಿ ಡಾ. ಕೆ.ಎನ್‌.ತನುಜಾ, ಸಹಾಯಕ ಕೃಷಿ ನಿರ್ದೇಶಕ ಅಣಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಶಿಕ್ಷಣ ಸಂಯೋಜಕರಾದ ಬಸವರಾಜ ಛಬ್ಬಿ, ಶ್ರೀಕಾಂತ ಗೌಡರ, ಮುಖ್ಯಾಧ್ಯಾಪಕರಾದ ಪುಡಕಲಕಟ್ಟಿ ಪ್ರೌಢಶಾಲೆಯ ನಾರಾಯಣ ಪತ್ತಾರ, ಕರಡಿಗುಡ್ಡ ಕೆಪಿಎಸ್ ಪ್ರೌಢಶಾಲೆಯ ಉಮಾಕಾಂತ ಕರ್ಚಕಟ್ಟಿ, ಯಾದವಾಡ ಸರಕಾರಿ ಪ್ರೌಢಶಾಲೆಯ ಬಿ.ಬಿ.ದುಬ್ಬನಮರಡಿ, ಉಪ್ಪಿನಬೆಟಗೇರಿ ಎಸ್‌.ಜಿ.ವಿ. ಪ್ರೌಢಶಾಲೆಯ ಎ.ಎ.ಮುಲ್ಲಾ, ಎಂ.ಜೆ.ಹಳವೂರ ಉರ್ದು ಪ್ರೌಢಶಾಲೆಯ ಯಾಕೂಬ ಜೋರಮನ್ನವರ ಹಾಗೂ ಉಪ್ಪಿನಬೇಟಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ಬಸೀರ ಮಾಳಗಿಮನಿ, ಉಪಾಧ್ಯಕ್ಷೆ ಹೆಗಡೆ, ಎಸ್‌.ಜಿ.ವಿ ಸಂಸ್ಥೆಯ ಚೇರಮನ್ ವೀರಣ್ಣ ಪರಾಂಡೆ, ಗೌರವ ಕಾರ್ಯದರ್ಶಿ ಗಂಗಪ್ಪ ಜವಳಗಿ, ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ರಾಮಲಿಂಗಪ್ಪ ನವಲಗುಂದ, ಮಲ್ಲಪ್ಪ ಅಷ್ಟಗಿ, ಧರೆಪ್ಪ ಬೊಬ್ಬಿ, ನಿಂಗಪ್ಪ ಸಂಕಣ್ಣವರ ಸೇರಿದಂತೆ ಗ್ರಾಮದ ಪ್ರಮುಖರಾದ ಮಹಾವೀರ ಅಷ್ಟಗಿ, ಸುರೇಶಬಾಬು ತಳವಾರ ಹಾಗೂ ಇತರರು ಇದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಬೆಟಗೇರಿ ಕ್ಲಸ್ಟರ್‌ದಲ್ಲಿ ಬರುವ ವಿವಿಧ ಪ್ರೌಢಶಾಲೆಗಳ ಎಸ್‌.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಮಕ್ಕಳ ಪಾಲಕರು, ತಂದೆ-ತಾಯಿಗಳು, ಗ್ರಾಮದ ಪ್ರಮುಖರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಉಪ್ಪಿನಬೆಟಗೇರಿ ಗ್ರಾಮದ ಪುರಾತನ ಯಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಪರವಾಗಿ ಸನ್ಮಾನಿಸಿ, ಗೌರವಿಸಿದರು.