ಶಿಡಿಗಿನಮೊಳ ಗ್ರಾಮದ ಬಳಿ ಕೈಗಾರಿಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶ; ವಿಜ್ಞಾನಿಗಳು ಮಣ್ಣು ಪರೀಕ್ಷೆ

Destruction of soil fertility due to industry near Shidiginamola village; Scientists test the soil

ಶಿಡಿಗಿನಮೊಳ ಗ್ರಾಮದ ಬಳಿ ಕೈಗಾರಿಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶ; ವಿಜ್ಞಾನಿಗಳು ಮಣ್ಣು ಪರೀಕ್ಷೆ

ಬಳ್ಳಾರಿ 06: ತಾಲೂಕಿನ ಶಿಡಿಗಿನಮೊಳ ಗ್ರಾಮದ ಬಳಿ ಇರುವ ಕೈಗಾರಿಕೆಯಿಂದಾಗಿ ಸುತ್ತ ಮುತ್ತಲ ಗ್ರಾಮಗಳ ಮಣ್ಣಿನ ಫಲವತ್ತತೆ ಕ್ಷೀಣಿಸಿ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ಆರೋಪಿಸಿರುವ ಹಿನ್ನೆಲೆಯಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂದು ವಿವಿಧ ಗ್ರಾಮಗಳಿಗೆ ತೆರಳಿ ಮಣ್ಣಿನ ಫಲವತ್ತತೆ ಪರೀಕ್ಷಿಸಿದರು. 

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಚೆನ್ನ ದಾಸರ, ಹೊಲೆಯ ದಾಸರ, ಮಾಲಾ ದಾಸರ ಜನ ಸೇವಾ ಸಮಿತಿ ಬೆಂಗಳೂರು ಮತ್ತು ಜಿಲ್ಲಾ ರೈತ ಹಾಗೂ ಗ್ರಾಮಾಭಿವೃದ್ಧಿ ಮತ್ತು ಪರಿಸರ ರಕ್ಷಣಾ ಸಮಿತಿ ಪದಾಧಿಕಾರಿಗಳು ಇತ್ತೀಚೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕೈಗಾರಿಕೆಯಿಂದ ಶಿಡಿಗಿನಮೊಳ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರ ಬವಣೆಗಳ ಕುರಿತು ನಿವೇದಿಸಿಕೊಂಡಿದ್ದರು.  

ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳ ತಂಡವು ಇಂದು ಶಿಡಿಗಿನಮೊಳ ಗ್ರಾಮಕ್ಕೆ ಆಗಮಿಸಿ ರೈತರ ಅಹವಾಲುಗಳನ್ನು ಆಲಿಸಿದರು.ಬಳಿಕ ಕಾರೇಕಲ್ಲು,  ಬ್ಯಾಲಚಿಂತೆ, ಕೆ.ವೀರಾಪುರ ಮತ್ತು ಮೀನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ತೊಗರಿ, ಜೋಳ, ಕಡಲೆ ಮತ್ತು ಮಣ್ಣಿನ ಮಾದರಿಗಳನ್ನು ಪಡೆದರು. ಕೃಷಿ ವಿಜ್ಞಾನಿಗಳ ತಂಡದ ಮುಖ್ಯಸ್ಥರಾದ ಡಾ.ಜಿ. ಗೀರೀಶ್, ಸದಸ್ಯರುಗಳಾದ ಡಾ,ಕೃಷಮೂರ್ತಿ, ಡಾ.ಚಂದ್ರ ನಾಯ್ಕ, ಡಾ. ರವಿ ಎಸ್, ಡಾ.ಪಾಲಯ್ಯ, ಡಾ. ಬಸವರಾಜ ಮತ್ತು ಅಧಿಕಾರಿಗಳಾದ ರೇಖಾ, ಮಾರುತಿ ಪ್ರಸಾದ್, ಶಿವಪ್ಪ ಇನ್ನಿತರರು ತಂಡದಲ್ಲಿ ಇದ್ದರು.  

ವಿಜ್ಞಾನಿಗಳೊಂದಿಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಚೆನ್ನ ದಾಸರ, ಹೊಲೆಯ ದಾಸರ, ಮಾಲಾ ದಾಸರ ಜನ ಸೇವಾ ಸಮಿತಿ ಬೆಂಗಳೂರು ಮತ್ತು ಜಿಲ್ಲಾ ರೈತ ಹಾಗೂ ಗ್ರಾಮಾಭಿವೃದ್ಧಿ ಮತ್ತು ಪರಿಸರ ರಕ್ಷಣ ಸಮಿತಿಯ ಉಭಯ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳ ರೈತರು, ಮುಖಂಡರು, ಸಮಾಜ ಸೇವಕರು ಈ ಸಂದರ್ಭದಲ್ಲಿ ಇದ್ದರು.