ತಾಲೂಕಾಡಳಿತ ಕ್ರಮಗಳ ಪರಿಶೀಲಿಸಿದ ಕಂದಾಯ ಸಚಿವ ದೇಶಪಾಂಡೆ ತಹಶೀಲ್ದಾರ ತರಾಟೆಗೆ

ರಾಮದುರ್ಗ 18: ರಾಜ್ಯ ಸರಕಾರ ತಾಲೂಕನ್ನು ಬರಪೀಡಿತವೆಂದು ಘೋಷಿಸಿದ್ದು, ಕೆ.ಚಂದರಗಿಯಲ್ಲಿ ಪ್ರಾರಂಭಿಸಲಾದ ಮೇವು ಬ್ಯಾಂಕ್ಗೆ ಶನಿವಾರ ಬೇಟಿ ನೀಡಿದ ಕಂದಾಯ ಸಚಿವ ಆರ್.ವ್ಹಿ. ದೇಶಪಾಂಡೆ ತಾಲೂಕಾಡಳಿತ ಬರ ನಿರ್ವಹಣೆಗೆ ತೆಗೆದುಕೊಂಡ ಪರಿಹಾರ ಕ್ರಮಗಳ ಬಗೆಗೆ ಮಾಹಿತಿ ಪಡೆದು, ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿಫಲಗೊಂಡ ತಹಶೀಲ್ದಾರ ಬಸನಗೌಡ ಕೋಟೂರ ಅವರನ್ನು ತರಾಟೆಗೆ ತೆಗೆದುಕೊಂಡರು.

ಕೆ.ಚಂದರಗಿ ವ್ಯಾಪ್ತಿಯ ಸುಮಾರು 2500 ಜನಸಂಖ್ಯೆ ಹೊಂದಿದ್ದರೂ ಕೇವಲ 8 ಟ್ಯಾಂಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ಕೇವಲ 5 ಕೋಡ ನೀರಿನ ವ್ಯವಸ್ಥೆ ಮಾಡಿದ್ದು, ಸಮರ್ಪಕವಾಗಿ ನೀರು ದೊರೆಯುತ್ತಿಲ್ಲವೆಂದು ಎಂದು ಸಚಿವ ಆರ್.ವ್ಹಿ. ದೇಶಪಾಂಡೆ ಅವರಿಗೆ ಜನತೆ ದೂರು ನೀಡಿದರು. 

ಪ್ರಸ್ತುತ ಸರಬರಾಜು ಮಾಡುತ್ತಿರುವ ನೀರು ಸಾಕಾಗುವುದಿಲ್ಲ. ಸರಕಾರ ಬರ ನಿರ್ವಹಣೆಗೆ ಸಾಕಷ್ಟು ಹಣ ನೀಡಿದೆ. ಜನ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಬೇಕು. ಇನ್ನು ಮುಂದೆ ಸಾರ್ವಜನಿಕರಿಂದ ದೂರು ಕೇಳಿಬಂದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವರು ಸ್ಥಳಲ್ಲಿದ್ದ ತಹಶೀಲ್ದಾರ ಬಸನಗೌಡ ಕೋಟೂರ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮೇವು ಬ್ಯಾಂಕ್ಗೆ ಬೇಟಿ ನೀಡುವ ಮುನ್ನ ಮಾರ್ಗಮಧ್ಯದಲ್ಲಿರುವ ಕೆ.ಚಂದರಗಿ ಹೋಬಳಿ ವ್ಯಾಪ್ತಿಯ ಎಂ.ಚಂದರಗಿ ಗ್ರಾಮದ ರೈತ ಸಿದ್ರಾಮಪ್ಪ ಕೌಜಲಗಿ ಅವರ ಜಮೀನಿಗೆ ಬೇಟಿನೀಡಿ, ಸಂಪೂರ್ಣ ಒಣಗಿ ನಾಶಗೊಂಡ ಕಬ್ಬಿನ ಬೆಳೆ ವೀಕ್ಷಿಸಿದ ಸಚಿವ ದೇಶಪಾಂಡೆ, ಸಂಕಷ್ಟದಲ್ಲಿರುವ ರೈತನನ್ನು ಸಮಾಧಾನಪಡಿಸಿದರು.

ಸತತ ಬರಗಾಲದಿಂದ ರೈತರು ಕಂಗಾಲಾಗಿದ್ದು ಇಲ್ಲಿಯವರೆಗೆ ರೈತರಿಗೆ ಸರಕಾರದಿಂದ ನಯಾಪೈಸೆ ಪರಿಹಾರ ಲಭ್ಯವಾಗಿಲ್ಲ.ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿ ಜೀವನ ನಿರ್ವಹಣೆ ದುಸ್ಥರವಾಗಿದೆ ಕೂಡಲೇ ಸರಕಾರರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆಂದು ಜನತೆ ತಮ್ಮ ಅಳಲು ತೊಡಿಕೊಂಡರು.

ಕೋಟ್-1

ಬರಪೀಡಿತ ತಾಲೂಕುಗಳ ಜನ ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸರಬರಾಜಿಗೆ ಸರಕಾರ ವ್ಯವಸ್ಥೆ ಕಲ್ಪಿಸಿದೆ. ಜನತೆ ಗೂಳೆ ಹೋಗದಂತೆ ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಜನತೆಗೆ ಕೆಲಸ ನೀಡಿಲಾಗುತ್ತಿದೆ. ನರೇಗಾ ಯೋಜನೆಗೆ ಕೇಂದ್ರ ಸರಕಾರದಿಂದಲೇ ಶೇಕಡಾ 80 ರಷ್ಟು ಹಣ ಬರಬೇಕು. ಆದರೆ ಸಕಾಲಕ್ಕೆ ಕೇಂದ್ರ ಸರಕಾರದ ಹಣ ಬರದ ಕಾರಣ ಕಾಮಗಾರಿ ವೆಚ್ಚ ಕೂಲಿ ಪಾವತಿಯಲ್ಲಿ ವಿಳಂಭವಾಗುತ್ತಿದೆ. ಕೂಡಲೇ ಈ ಕುರಿತು ಚಚರ್ಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ.

ಆರ್.ವ್ಹಿ. ದೇಶಪಾಂಡೆ ಕಂದಾಯ ಸಚಿವ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಶಾಲ ಆರ್, ತಹಶೀಲ್ದಾರ ಬಸನಗೌಡ ಕೋಟೂರ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಮಾರುತಿ ಎಂ.ಪಿ, ಕೃಷಿ ಇಲಾಖೆಯ ಜಂಟಿ ನಿದರ್ೇಶಕ ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿದರ್ೇಶಕ ಎಸ್.ಎಫ್. ಬೆಳವಟಗಿ, ಪಶು ವೈಧ್ಯಾಧಿಕಾರಿ ಗಿರೀಶ ಪಾಟೀಲ, ಡಿವೈಎಸ್ಪಿ ಬಿ.ಎಸ್. ಪಾಟೀಲ, ಪಿಡಿಓ ಮಂಜು ದೇವರಡ್ಡಿ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವು ಗೊರವನಕೊಳ್ಳ, ಆನಂದ ಮರದಬುಡಕಿನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಇದ್ದರು.