ಜನಮನ ಸೆಳೆದ ವಿಜ್ಞಾನ, ಗಣಿತ ಭಾಷಾ ವಿಷಯಗಳ ಪ್ರದರ್ಶನ
ಅಥಣಿ 11: ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ.ಹೈಸ್ಕೂಲನ ವಿದ್ಯಾರ್ಥಿಗಳು ವಾರ್ಷಿಕೋತ್ಸವದ ಅಂಗವಾಗಿ ವಿಜ್ಞಾನ ಮತ್ತು ಗಣಿತ ಹಾಗೂ ಭಾಷಾ ವಿಷಯಗಳ ಮೇಲೆ ಮಾಡಿದ ಪ್ರದರ್ಶನ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಪ್ರದರ್ಶನ ವೀಕ್ಷಿಸಿ ಮಾತನಾಡಿದ ಜಾಧವಜಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಸಂಜೀವ ಪಾಟೀಲ, ಪಟ್ಟಣ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೆಲವೇ ಕೆಲವು ಅನಕೂಲತೆಗಳನ್ನು ಉಪಯೋಗಿಸಿಕೊಂಡು ಎಲ್ಲರೂ ಮೆಚ್ಚುವಂತೆ ಗಣಿತ, ವಿಜ್ಞಾನ ಹಾಗೂ ಭಾಷಾ ವಿಷಯಗಳ ಮೇಲೆ ಪ್ರದರ್ಶನ ಅಚ್ಚುಕಟ್ಟಾಗಿ ಮಾಡಿರುವ ಜೊತೆಗೆ ಪ್ರದರ್ಶನ ವೀಕ್ಷಿಸಲು ಬಂದ ಪ್ರೇಕ್ಷಕರಿಗೂ ಉತ್ತಮ ರೀತಿಯಲ್ಲಿ ಮಾಹಿತಿ ನೀಡಿರುವುದು ಕೂಡ ಎಲ್ಲರ ಗಮನ ಸೆಳೆದಿದೆ ಎಂದರು.
ಸಂಸ್ಥೆಯ ಸದಸ್ಯ ಡಾ.ವಿಶ್ವನಾಥ ಕುಲಕರ್ಣಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಹೊರ ಬರಲು ಶಾಲೆಗಳಲ್ಲಿ ವಸ್ತು ಪ್ರದರ್ಶನಗಳಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತದೆ ಎಂದ ಅವರು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪಾಲಕರು, ಶಾಲೆಗಳಲ್ಲಿ ಶಿಕ್ಷಕರು ಅಗತ್ಯ ಮಾರ್ಗದರ್ಶನ ಮಾಡಬೇಕು ಆಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳ ಪ್ರದರ್ಶನವನ್ನು ಜಾಧವಜಿ ಸಂಸ್ಥೆಯ ರವಿ ಕುಲಕರ್ಣಿ, ಡಾ.ಶ್ರೀವತ್ಸ ಕುಲಕರ್ಣಿ, ಶಾಲಾ ಮುಖ್ಯಾಧ್ಯಾಪಕ ಜಿ.ಐ.ಪಾಟೀಲ, ವಿಜ್ಞಾನ ಶಿಕ್ಷಕಿ ಪ್ರೀತಿ ಕೊಕಟನೂರ, ಗಣಿತ ಶಿಕ್ಷಕ ಎಸ್.ಆರ್.ಪಾಟೀಲ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು, ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.