ಪಿಡಿಓ ಬದಲಾವಣೆಗೆ ಆಗ್ರಹಿಸಿ ಉಗಾರ ಬುದ್ರಕ್ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ

Demanding change of PDO, Ugara Budrak G.P. was locked and protested

ಪಿಡಿಓ ಬದಲಾವಣೆಗೆ ಆಗ್ರಹಿಸಿ ಉಗಾರ ಬುದ್ರಕ್ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ 

ಕಾಗವಾಡ 01: ತಾಲೂಕಿನ ಉಗಾರ ಬುದ್ರಕ್ ಗ್ರಾಮ ಪಂಚಾಯತಿಗೆ ಎಲ್ಲ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಬೀಗ ಜಡಿದು, ಪಿಡಿಓ ಬದಲಾವಣೆ ಮತ್ತು ಇತರ ಬೇಡಿಕೆಗಳಿಗೆ ಆಗ್ರಹಿಸಿ, ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ದಿ. 01 ರಂದು ನಡೆದಿದೆ. ಉಗಾರ ಬುದ್ರಕ್ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಎಲ್ಲ 26 ಜನ ಸದಸ್ಯರು ಸಾಮೂಹಿಕವಾಗಿ ಗ್ರಾಮ ಪಂಚಾಯತ ಸಿಬ್ಬಂದಿಗಳನ್ನು ಹೊರ ಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪಿಡಿಓ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ, ಪ್ರತಿಟಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಇಓ ವೀರಣ್ಣಾ ವಾಲಿ ಪ್ರತಿಭಟನೆ ನಿರತ ಸದಸ್ಯರ ಜೊತೆ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಒಂದು ವಾರದ ಒಳಗಾಗಿ ನಿಮ್ಮ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರು ಅದಕ್ಕೆ ಜಗ್ಗದೇ ಪ್ರತಿಭಟನೆ ಮುಂದುವರೆಸಿದರು. ಈ ಸಮಯದಲ್ಲಿ ಉಪಾಧ್ಯಕ್ಷ ಅಮೀನ ಶೇಖ ಹಾಗೂ ಸದಸ್ಯ ಅಣ್ಣಾಗೌಡಾ ಪಾಟೀಲ ಮಾತನಾಡಿ, ಕಳೆದ ಎರಡೂವರೇ ವರ್ಷದಿಂದ ಇಲ್ಲಿಯ ಪಿಡಿಓ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವೇಳೆಗೆ ಸರಿಯಾಗಿ ಪಂಚಾಯತಿಗೆ ಆಗಮಿಸುತ್ತಿಲ್ಲ. ಇತ್ತಿಚಿಗೆ ನಡೆದ ಗಣರಾಜೋತ್ಸವದಂದು ಸಹ ಕಾರ್ಯಾಲಕ್ಕೆ ಗೈರ ಇದ್ದು, ಅವರ ಕಾರ್ಯವೈಖರಿಯನ್ನು ತೋರಿಸುತ್ತದೆ. ಎರಡೂವರೆ ವರ್ಷದಿಂದ ಗ್ರಾಮಸ್ಥರ ಯಾವುದೇ ಕೆಲಸಗಳಿಗೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮಸ್ಥರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಅವರನ್ನು ಬೇರಡೆಗೆ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಗ್ರಾ.ಪಂ. ಸದಸ್ಯರಾದ ಮುನಾಫ ಚೌಧರಿ, ಸುನಂದಾ ಸನದಿ, ನಜೀರ ಪಠಾಣ, ಸಾಗರ ಪೂಜಾರಿ, ರಾಹುಲ ಭೋಸಲೆ, ಉಜ್ವಲಾ ಚೌಗುಲೆ, ಶ್ರಾವವ ಗೊಂಧಳೆ, ಪ್ರಶಾಂತ ವಸವಾಡೆ, ದಿಲಾವರ ನೇಜಕರ, ಸಾಗರ ಪೂಜಾರಿ, ರವಿ ಕಮತೆ, ಮನೋಜ ಕುಸನಾಳೆ, ಸುರೇಶ ಪರಮಾಜೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.