ನಿವೃತ್ತ ಕಾರ್ಮಿಕರ ಕುಟುಂಬ ವಸತಿ ಸೌಲಭ್ಯ ಒದಗಿಸಬೇಕೆಂದು ಆಗ್ರಹ

ನಿವೃತ್ತ ಕಾರ್ಮಿಕರ ಕುಟುಂಬ ವಸತಿ ಸೌಲಭ್ಯ ಒದಗಿಸಬೇಕೆಂದು ಆಗ್ರಹ Demand to provide family housing facilities to retired workers

                 ದಾಂಡೇಲಿ  22: ಹಳೇ ದಾಂಡೇಲಿಯ ಕೆ.ಎಸ್‌.ಎಫ್‌.ಐ.ಸಿ ವಸತಿಗೃಹಗಳ 172 ಕುಟುಂಬಗಳ ಬದುಕಿನ ಪ್ರಶ್ನೆ ಇದಾಗಿದ್ದು, ಈ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ಹಾಗೂ ನಿವೃತ್ತ ಕಾರ್ಮಿಕರ ಕುಟುಂಬಗಳನ್ನು ತೆರವುಗೊಳಿಸಿದಂತೆ ಮತ್ತು ಅವರಿಗೆ ಖಾಯಂ ವಸತಿ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಡಿ.ವೈ.ಎಫ್‌ಐ. ಜಿಲ್ಲಾ ಸಮಿತಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ಆರ್‌.ವಿ. ದೇಶಪಾಂಡೆಯವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಕೆ.ಎಸ್‌.ಎಫ್‌.ಐ.ಸಿ ಸಂಸ್ಥೆ ಅರಣ್ಯ ಇಲಾಖೆಯ ಒಂದು ಕೈಗಾರಿಕಾ ಘಟಕವಾಗಿದ್ದು, ಆರಂಭಿಕ ದಿನಗಳಲ್ಲಿ ಇದು ಕಟ್ಟಿಗೆ ಉದ್ಯಮದ ರೂಪದಲ್ಲಿತ್ತು ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ 172 ಮನೆಗಳನ್ನು ನಿರ್ಮಿಸಿ, ಮಾಸಿಕ ಬಾಡಿಗೆ ನಿಗದಿ ಮಾಡಿ ಕಾರ್ಮಿಕರಿಗೆ ನೀಡಲಾಗಿತ್ತು. 1962 ರಲ್ಲಿ ಈ ಭೂಮಿಯನ್ನು ಅರಣ್ಯ ಇಲಾಖೆ ಮತ್ತು ಕೆ.ಎಸ್‌.ಎಫ್‌.ಐ.ಸಿ ಕಾಯ್ದಿರಿಸಿಕೊಂಡಿದ್ದವು. ನಂತರ 1972 ರಲ್ಲಿ ಈ ಜಮೀನು ಸಂಪೂರ್ಣವಾಗಿ ಡಿಸ್ ಫಾರೆಸ್ಟ್‌ ಆಗಿ ನಗರಸಭೆ ಸುಪರ್ದಿಗೆ ಹಸ್ತಾಂತರಗೊಂಡಿದೆ.

                ಈ ಜಮೀನು ನಗರಸಭೆಗೆ ಸೇರಿದ ಹಿನ್ನೆಲೆಯಲ್ಲಿ ಇಲ್ಲಿ ನಿರ್ಮಾಣಗೊಂಡಿರುವ 172 ಮನೆಗಳು ಸಹ ನಗರಸಭೆಯ ಆಸ್ತಿಯಾಗಿರುತ್ತದೆ. ಹೀಗಾಗಿ ಈ ಮನೆಗಳ ಸಂಪೂರ್ಣ ನಿರ್ವಹಣೆ ಮತ್ತು ಉಸ್ತುವಾರಿ ನಗರಸಭೆಯದ್ದೇ ಆಗಿರುತ್ತದೆ ಎಂದು ಮನವಿಯಲ್ಲಿ ಡಿ.ವೈ.ಎಫ್‌.ಐ ಸ್ಪಷ್ಟಪಡಿಸಿದೆ.  ವಸತಿ ಕಳೆದುಕೊಳ್ಳುವ ಭೀತಿ: ಪ್ರಸ್ತುತ  ಈ 172 ಮನೆಗಳಲ್ಲಿರುವ ಕಾರ್ಮಿಕರ ಕುಟುಂಬಗಳಿಂದ ಬಾಡಿಗೆ ಕೂಡಾ ಸಂಗ್ರಹಿಸಲಾಗುತ್ತಿಲ್ಲ ಎಂದು ತಿಳಿದುಬಂದಿದ್ದು ಇದರಿಂದಾಗಿ ಈ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ ಈ ಮನೆಗಳು ನಗರಸಭೆ ವ್ಯಾಪ್ತಿಗೆ ಸೇರಿರುವದರಿಂದ ನಗರಸಭೆಯೇ ಅವುಗಳನ್ನು ನಿರ್ವಹಣೆ ಮಾಡಬೇಕು ಮತ್ತು ಇಲ್ಲಿ ವಾಸಿಸುತ್ತಿರುವವರಿಗೆ ವಸತಿ ಸೌಲಭ್ಯವನ್ನು ಖಾತ್ರಿ ಪಡಿಸಬೇಕು. 172 ಮನೆಗಳನ್ನು ಖಾಲಿ ಮಾಡಿಸಿದರೆ, ಆ ಕುಟುಂಬಗಳು ಎಲ್ಲಿಗೆ ಹೋಗಬೇಕು? ದಾಂಡೇಲಿ ನಗರದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಈ ಕಾರ್ಮಿಕರ ಬದುಕಿನ ಹಿತವನ್ನು ಕಾಯುವದು ನಗರಸಭೆಯ ಕರ್ತವ್ಯವಾಗಿದೆ. ಅವರಿಗೆ ಖಾಯಂ ವಸತಿ ಸೌಲಭ್ಯ ಒದಗಿಸುವ ಹೊಣೆಗಾರಿಕೆಯು ನಗರಸಭೆಯದ್ದೇ ಎಂದು ಡಿ.ವೈಎಫ್‌.ಐ  ರಾಜ್ಯ ಸಮಿತಿಯ ಸದಸ್ಯ ಡಿ. ಸ್ಯಾಮಸನ್ ಹೇಳಿದ್ದಾರೆ.