ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ಬ್ಯಾಡಗಿ 11: ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.16 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಹೇಳಿದರು.ಅವರು ಜಿಲ್ಲೆಯ ರಾಣೆಬೆನ್ನೂರಿನ ಅಕ್ಷಯ ಹೋಟೆಲ್ಲಿನಲ್ಲಿ ರಾಣೆಬೆನ್ನೂರು ತಾಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ನಡೆದ ಪತ್ರಿಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈಗಾಗಲೇ ಹತ್ತು ಹಲವಾರು ಬಾರಿ ಮುಖ್ಯಮಂತ್ರಿ ಹಾಗೂ ವಾರ್ತಾ ಸಚಿವರಲ್ಲಿ ನಮ್ಮ ವಿವಿಧ ಬೇಡಿಕೆಗಳ ಬಗ್ಗೆ ಗಮನ ಸೆಳೆದಿದ್ದೇವೆ. ಆದರೆ ಸರ್ಕಾರ ನಮ್ಮ ಯಾವುದೇ ಬೇಡಿಕೆಗಳ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಆಳುವವರನ್ನು ಕಿವಿ ಹಿಡಿದು ಕೇಳುವವರೆಗೂ ನಮ್ಮ ಹೋರಾಟ ಮುಂದುವರಿದಾಗ ಮಾತ್ರ ನಮ್ಮ ಬೇಡಿಕೆ ಈಡೇರಲು ಸಾಧ್ಯವೆಂದರು.ಜಿಲ್ಲೆ ಹಾಗೂ ತಾಲೂಕಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿಬಸ್ ಪಾಸ್ ನೀಡುವ ಚಿಂತನೆಯಲ್ಲಿದ್ದು, ಸರ್ಕಾರ ರೂಪಿಸಿರುವ ನಿಯಮಾವಳಿಗಳು ಅವೈಜ್ಞಾನಿಕವಾಗಿವೆ. ಆ ನಿಯಮಗಳಡಿ ಯಾವುದೇ ತಾಲೂಕಾ ಪತ್ರಕರ್ತರಿಗೆ ಬಸ್ ಪಾಸ್ ಸಿಗುವುದು ಕನಸ್ಸಿನ ಮಾತಾಗಿದೆ.
ನಿವೃತ್ ಪತ್ರಕರ್ತರಿಗೆ ನೀಡುವ ಮಾಶಾಸನದಲ್ಲಿಯೂ ಕೆಲವು ನಿಯಮಗಳು ಗೊಂದಲ ಮೂಡಿಸುವಂತಿವೆ, ಪ್ರತಿ ತಾಲೂಕಿನ ಪತ್ರರ್ತರಿಗೆ ನಿವೇಶನ ಸೌಲಭ್ಯ ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರ ನೇತೃತ್ವದಲ್ಲಿ ಬೆಳಗಾವಿಯ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ 8 ತಾಲೂಕಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆಯನ್ನು ರಾಣೆಬೆನ್ನೂರಿನ ಪ್ರವಾಸಿ ಮಂದಿರದಲ್ಲಿ ಡಿ. 13 ರಂದು ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರಅಧ್ಯಕ್ಷತೆ ಯಲ್ಲಿ ಸಭೆ ಕರೆಯಲಾಗಿದೆ. ಆದ್ದರಿಂದ ಅಂದಿನ ಸಭೆಗೆ ಜಿಲ್ಲೆಯ 8 ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಜಿಲ್ಲಾಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಹೇಳಿದರು.ಸಭೆಯಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ವೀರಭದ್ರಗೌಡ್ರ ಹೊಮ್ಮರಡಿ, ರಾಣೆಬೆನ್ನೂರ ತಾಲೂಕಿನ ಬೀರೇಶ ಪೂಜಾರ, ಹಿರೇಕೆರೂರ ತಾಲೂಕಿನ ಎಲ್ಲಪ್ಪ ಮರಾಠೆ, ರಟ್ಟಿಹಳ್ಳಿ ತಾಲೂಕಿನ ಮಹಮ್ಮದ್ ಯೂಸುಫ್ ಸೈಕಲ್ ಗಾರ, ಸಂಪಾದಕ ಬ್ರಹ್ಮಾನಂದ ಉಜ್ಜೇರ, ಸಂಪಾದಕ ಅಭಿಶೇಕ ಪೂಜಾರ, ಪತ್ರಕರ್ತರಾದಸೂರಜ್ ಭೂತೆ ಸೇರಿದಂತೆ ಇತರರಿದ್ದರು.