ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ
Demand appropriate action to resolve the problems of women and children
ಧಾರವಾಡ 25: ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಮಹಿಳೆಯರು-ಮಕ್ಕಳ ಮೇಲಿನ ಅತ್ಯಾಚಾರ, ಗುಂಪು ಅತ್ಯಾಚಾರ, ಕೊಲೆ,ಮರ್ಯಾದಾಗೇಡು ಹತ್ಯೆ, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯದಂತಹ ಘಟನೆಗಳು ಜನತೆಯನ್ನು ಆಕ್ರೋಶ ಭರಿತರನ್ನಾಗಿಸಿವೆ. ಕಣ್ಣು ಬಿಡುವ ಮುನ್ನವೇ ಉಸಿರು ನಿಲ್ಲಿಸಿ ತಿಪ್ಪೆಗೆ ಎಸೆಯುವ ಸ್ತ್ರೀ ಭ್ರೂಣ ಹತ್ಯೆ ಅವ್ಯಾಹತವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವುದು ಸಮಸ್ಯೆಯ ಆಳವನ್ನು ತೋರಿಸುತ್ತದೆ. ಇನ್ನು ಅತ್ಯಾಚಾರ ಮತ್ತು ಗುಂಪು ಅತ್ಯಾಚಾರ ಪ್ರಕರಣಗಳು 2023ರಲ್ಲಿ 600, 2024ರಲ್ಲಿ 739 ಕೇಸುಗಳು ಹಾಗೂ 2025ರ ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ರಾಜ್ಯದಲ್ಲಿ 4 ತಿಂಗಳಲ್ಲಿಯೇ 979 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲೇ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ.
ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿವೆ. 2025ರ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ 43,000ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಹಾಗೂ ಆಡಿ ನಲಿಯಬೇಕಿದ್ದ ಎಳೆಯ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳು ಶೇಕಡಾ 26 ರಷ್ಟು ಹೆಚ್ಚಾಗಿವೆ. ಅದರಂತೆ ದಾಖಲಾದ ಅರ್ಧದಷ್ಟು ಪ್ರಕರಣಗಳು ಖುಲಾಸೆಯಾಗುತ್ತಿವೆ. 2022 ರಲ್ಲಿ ದಾಖಲಾದ 3,209 ಪ್ರಕರಣಗಳಲ್ಲಿ 1,562 ಪ್ರಕರಣಗಳು ಖುಲಾಸೆಯಾಗಿವೆ, 1224 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ, ಇನ್ನು ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಕರು, ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರಂಥವರು ಭಾಗಿಯಾಗಿರುವುದು ನಾಡಿನ ದುರಂತವೇ ಸರಿ.
ಅದೇ ರೀತಿ ಕರ್ನಾಟಕದಲ್ಲಿ ಬಾಲ್ಯವಿವಾಹ, ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಆತಂಕಕಾರಿಯಾಗಿ ಬೆಳವಣಿಗೆ ಕಂಡಿವೆ. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್ ಸಿ ಎಚ್) ಪೋರ್ಟಲ್ ನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 2023-24ರ ಜುಲೈ ವರೆಗೆ 80,813 ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ವರದಿಯಾಗಿವೆ. ಇತ್ತೀಚಿಗೆ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಕರಣಗಳು ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿವೆ. ಇವು ಕೇವಲ ದಾಖಲಾದ ಅಂಕಿ ಅಂಶಗಳಾದರೆ, ಕೌಟುಂಬಿಕ ಗೌರವಕ್ಕೆ ಧಕ್ಕೆ ಉಂಟಾಗಬಹುದು ಎಂಬ ಕಾರಣಗಳಿಗಾಗಿ ದಾಖಲಾಗದೆ ಉಳಿದಿರುವ ಎಷ್ಟೋ ಪ್ರಕರಣಗಳು ಇನ್ನೂ ಇವೆ. ಇತ್ತೀಚಿಗೆ 340 ವರದಕ್ಷಣೆ ಸಾವುಗಳು ವರದಿಯಾಗಿವೆ. ಕೌಟುಂಬಿಕ ದೌರ್ಜನ್ಯದಲ್ಲಂತೂ ಕರ್ನಾಟಕ, ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.
ಅನ್ಯ ಜಾತಿಯ ಅಥವಾ ಕೋಮಿನ ಹುಡುಗನನ್ನು ಪ್ರೀತಿಸಿದಳು ಎಂಬ ಒಂದೇ ಕಾರಣಕ್ಕಾಗಿ ಹೆತ್ತ ಮಗಳನ್ನೇ ಕೊಲ್ಲುವ ಮರ್ಯಾದಾಗೇಡು ಹತ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಹೀನ ಕೃತ್ಯದ ವಿರುದ್ಧ ಕಾನೂನನ್ನು ಕೂಡಲೇ ಜಾರಿಗೊಳಿಸಬೇಕು. ಜೊತೆಗೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಆಸಿಡ್ ಎರಚುವುದು, ಕೊಲ್ಲುವುದು, ಸೈಬರ್ ಸ್ಟಾಕಿಂಗ್, ಡಿಜಿಟಲ್ ದಾಳಿಗಳು, ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆಯಂತಹ ಸಮಸ್ಯೆಗಳು ಪ್ರತಿಕ್ಷಣ ಎಷ್ಟೋ ಹೆಣ್ಣು ಮಕ್ಕಳ ಜೀವ ತೆಗೆಯುತ್ತಿವೆ. ಈ 21ನೇ ಶತಮಾನದಲ್ಲೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಜ್ಞಾನದ ಬಾಗಿಲು ತೆರೆದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಮ್ಯಾಗ್ನೆಟ್ ಯೋಜನೆಯಡಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ಕ್ರಮ ಅಲ್ಪ ಸ್ವಲ್ಪ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವ ಹೆಣ್ಣುಮಕ್ಕಳ ಭವಿಷ್ಯಕ್ಕೆ ಕೊಡಲಿಯೇಟು ಕೊಡುತ್ತಿದೆ. ಹಾಗೂ ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಪರಿಗಣಣೆಗೆ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಲಾಯಿತು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 