ಹಾರೂಗೇರಿಯಲ್ಲಿ ಅಮಿತ್ ಶಾ ವಿರುದ್ಧ ಸಿಡಿದೆದ್ದ ದಲಿತ ಸಂಘಟನೆಗಳು
ಹಾರೂಗೇರಿ 24: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ನೀಡಿರುವ ಅಗೌರವ ಹೇಳಿಕೆ ಖಂಡಿಸಿ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದಲ್ಲಿ ಮಂಗಳವಾರ ನಾನಾ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಜೈ ಭೀಮ ನಗರದ ಶ್ರೀದುರ್ಗಾದೇವಿ ದೇವಸ್ಥಾನದಿಂದ ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಡಾ.ಬಾಬಾಸಾಹೇಬ ಅಂಬೇಡ್ಕರ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಮೂರ್ತಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ಪೂಜ್ಯ ಶ್ರೀ ಬತ್ತೇಜಿ ಸ್ವಾಮಿಗಳು ಪೂಜೆ ಸಲ್ಲಿಸಿ, ಕೇಂದ್ರ ಸಚಿವ ಅಮಿತ್ ಶಾಗೆ ಧಿಕ್ಕಾರ ಕೂಗಿದರು.
ಡಾ.ಬಿ.ಆರ್.ಅಂಬೇಡ್ಕರ ಅವರ ನೂರಾರು ಭಾವಚಿತ್ರ, ಭೀಮ ಧ್ವಜದೊಂದಿಗೆ ನೂರಾರು ಪ್ರತಿಭಟನಾಕಾರರು ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿಹಾರ ಹಾಕಿ, ರಾಯಬಾಗ ರಸ್ತೆಯ ವೃತ್ತದಲ್ಲಿರುವ ಸಂಗೋಳ್ಳಿ ರಾಯಣ್ಣ ಸರ್ಕಲ್‌ವರೆಗೆ ಸಂಚರಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ, ಎರಡು ಗಂಟೆಗಳವರೆಗೆ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಯಿತು.
ನಾನಾ ಮುಖಂಡರು ಮಾತನಾಡುತ್ತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಪುಟ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಸಂಸತ್ ಸದಸ್ಯತ್ವ ರದ್ದುಗೊಳಿಸಬೇಕೆಂದು ಬಿಜೆಪಿ ಬೆಂಬಲಿತ ಸಂಘಟನೆಗಳ ವಿರುದ್ಧ ಹರಿಹಾಯ್ದರು.
ಪೂಜ್ಯಶ್ರೀ ಬಂತೇಜಿ ಸ್ವಾಮೀಜಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡುತ್ತ ಮೇಲ್ನೋಟಕ್ಕೆ ಮಾತ್ರ ಅಂಬೇಡ್ಕರ ಹೆಸರು ಹೇಳಿಕೊಂಡು, ಕೇವಲ ಮತಕ್ಕಾಗಿ ನಮ್ಮ ಸಮುದಾಯದವರನ್ನು ರಾಜಕಾರಣಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಾವೆಲ್ಲರೂ ಜಾಗೃತರಾಗಬೇಕಿದೆ. ಅಮಿತ್ ಶಾಗೆ ನಾಯಿ ಕಡಿದು, ಹುಚ್ಚು ಹಿಡಿದಿದೆ. ಭೀಮಾಕೋರೆಗಾಂವ ದಿವಸ ಇಂತಹವರಿಗೆ ಅಂತ್ಯ ಹಾಡಬೇಕು. ಇಂತವರನ್ನು ಮಟ್ಟ ಹಾಕಲು ನಾವೆಲ್ಲರೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ ಎಂದು ಹೇಳಿದರು.
ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಗೃಹ ಸಚಿವ ಸ್ಥಾನದಿಂದ ಕಿತ್ತು ಹಾಕಬೇಕೆಂದು ಒತ್ತಾಯಿಸಿ ತಹಸೀಲ್ದಾರ ಸುರೇಶ ಮುಂಜೆ ಮುಖಾಂತರ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಕೃಷ್ಣಾ ಕಲ್ಲೋಳಿಕರ, ಅಶೋಕ ಅರಕೇರಿ, ವಸಂತ ಅಲಖನೂರ, ಸುರೇಶ ಅರಕೇರಿ, ರಾಘವೇಂದ್ರ ಶಿಂಪಿ, ಸುರೇಶ ಐಹೊಳೆ, ನ್ಯಾಯವಾದಿ ಎಂ.ಎಂ.ಚಿಂಚಲಿಕರ, ಬಾಬುರಾವ ನಡೋಣಿ, ಅಪ್ಪಾಸಾಬ ಸರಿಕರ, ಯಲ್ಲಪ್ಪ ಶಿಂಗೆ, ಶಶಿಧರ ಶಿಂಗೆ, ಲಾಕೇಶ ಕಾಂಬಳೆ, ಅಪ್ಪಾಸಾಬ ಅರಕೇರಿ, ಸಿದ್ರಾಮ ಕಾಂಬಳೆ, ತಮ್ಮಣ್ಣಿ ಸರಿಕರ, ಮಹಾವೀರ ಕುರಾಡೆ, ಬುರಾನಸಾಬ ಶೇಖ, ಸುಕುಮಾರ ಕಾಂಬಳೆ, ಶ್ರಾವಣ ಕಾಂಬಳೆ, ಬಾಪುಸಾಬ ಜಮಾದಾರ, ಇಸ್ಮಾಯಿಲ್ ಎಲಿಗಾರ ಹಾಗೂ ವಿವಿಧ ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಮುಸ್ಲಿಂ, ಪರಿಶಿಷ್ಟ ಜಾತಿ ಸಮಾಜ ಮುಖಂಡರು ಹಾರೂಗೇರಿ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಾರೂಗೇರಿ ಸಿಪಿಐ ರವಿಚಂದ್ರ ಡಿ.ಬಿ, ಪಿ.ಎಸ್.ಐ ಮಾಳಪ್ಪ ಪೂಜಾರಿ ಸೂಕ್ತ ಬಂದೋಬಸ್ತ ಕೈಗೊಂಡಿದ್ದರು.