ಕುಸುಬೆಯಲ್ಲಿ ಕರಿ ಹೇನು: ನಿರ್ವಹಣಾ ಕ್ರಮಕ್ಕೆ ಸೂಚನೆ

ಕೊಪ್ಪಳ 14: ಕುಸುಬೆಯಲ್ಲಿ ಕರಿ ಹೇನಿನ ಸಮಸ್ಯೆ ಉಂಟಾಗುತ್ತಿದ್ದು, ನಿರ್ವಹಣಾ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ ಅವರು ತಿಳಿಸಿದ್ದಾರೆ.  

ಕುಸುಬೆ ಹಿಂಗಾರಿನ ಪ್ರಮುಖ ಎಣ್ಣೆಕಾಳು ಬೆಳೆಯಾಗಿದ್ದು, ಇದರ ಉತ್ಪಾದನೆಗೆ ಪ್ರಮುಖ ಸಮಸ್ಯೆ ಎಂದರೆ ಕರಿ ಹೇನು.  ಈ ಹೇನುಗಳು ಕಾಂಡ, ಎಲೆ ಮತ್ತು ತೊಂಡಿಲುಗಳಿಂದ ರಸ ಹೀರುವುದರಿಂದ ಎಲೆಗಳು ಬಾಡಿದಂತಾಗಿ ಮುದುರಿಕೊಳ್ಳುತ್ತವೆ.  ಎಲೆಗಳ ಮೇಲ್ಬಾಗದಲ್ಲಿ ಬೂಸ್ಟು ಬೆಳೆಯುತ್ತದೆ.  ಕೀಟದ ಭಾದೆ ತೀವ್ರವಾದಲ್ಲಿ ಗಿಡಗಳು ಸಂಪೂರ್ಣವಾಗಿ ಒಣಗುತ್ತವೆ. ಇದರ ಬಾದೆಯಿಂದಲೇ 30 ರಿಂದ 40 ರಷ್ಟು ಬೆಳೆಗೆ ಹಾನಿಯಾಗುವುದು.  ಆಥರ್ಿಕ ನಷ್ಟದ ರೇಖೆ 35 ರಿಂದ 40 ಹೇನುಗಳು ಪ್ರತಿ 2 ಇಂಚು ಕಾಂಡದ ತುದಿಗೆ.  

ನಿರ್ವಹಣೆ: ಶೇ5 ರ ಬೇವಿನ ಬೀಜದ ಕಷಾಯ ಅಥವಾ ಶೇ 1ರ ಹತ್ತಿಕಾಳು ಎಣ್ಣೆ ಅಥವಾ 1.7 ಮಿಲಿ ಡೈಮಿಥೋಯೇಟ್ 30 ಇ.ಸಿ. ಅಥವಾ 0.2 ಗ್ರಾಂ ಥಯೋಮಿಥಾಕ್ಸಮ್ ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.  ನೀರಿನ ಅಭಾವವಿದ್ದಲ್ಲಿ ಎಕರೆಗೆ 8-10 ಕಿ.ಗ್ರಾಂ ನಂತೆ ಕ್ವಿನಾಲಫಾಸ್ ಶೇ. 1.5 ರ ಪುಡಿ ಅಥವಾ ಶೇ 5ರ ಮೆಲಾಥಿಯಾನ್ ಪುಡಿಯನ್ನು ಬೆಳಯ ಮೇಲೆ ಬೆಳಗಿನ ಜಾವ ಧೂಳೀಕರಿಸಬೇಕು.  

ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ (ಕೀಟಶಾಸ್ತ್ರ) ಪಿ.ಆರ್. ಬದರಿಪ್ರಸಾದ್, ಮೊ.ಸಂ. 9900145705, ಎಂ.ಬಿ. ಪಾಟೀಲ ಮೊ. 9480696319, ಮತ್ತು ಪ್ರದೀಪ ಬಿರಾದಾರ ಮೊ. 9743064405, ಇವರನ್ನು ಸಂಪಕರ್ಿಸಬಹುದು.