ಧಾರವಾಡ 22: ಜನರ ನಡುವೆ ಕಟ್ಟುವ ರಂಗಭೂಮಿ ಮಾತ್ರ ಗಟ್ಟಿಯಾಗಿ ನಿಲ್ಲಬಲ್ಲದು. ಯಾವುದೋ ಒಂದು ಚೌಕಟ್ಟಿನಲ್ಲಿ ಕಟ್ಟುವ ರಂಗಭೂಮಿಗೆ ಭವಿಷ್ಯ ಕಡಿಮೆ ಎಂದು ಹಿರಿಯ ರಂಗಕಮರ್ಿ ಡಾ. ಶ್ರೀಪಾದ ಭಟ್ ಮಾತನಾಡಿದರು.
ಅವರು ರಂಗಾಯಣ ಧಾರವಾಡ ಇದರ ಆಶ್ರಯದಲ್ಲಿ ಧಾರವಾಡ ರಂಗಾಯಣ ಸುವರ್ಣ ಸಮುಚ್ಛಯದಲ್ಲಿ ಚಿಲಿಪಿಲಿ ಸಂಸ್ಥೆ ಮತ್ತು ಕುಮಾರೇಶ್ವರ ಕಲ್ಚರ್ ಸೊಸೈಟಿ ಹಮ್ಮಿಕೊಂಡಿದ್ದ ಹಿರಿಯ ಕಲಾವಿದರೊಂದಿಗೆ `ಪ್ರಸ್ತುತ ರಂಗಭೂಮಿಯ ತಲ್ಲನಗಳು' ಕುರಿತು ಕಿರಿಯ ಕಲಾವಿದರ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡುತ್ತಿದ್ದರು.
ಇಂದು ರಂಗಭೂಮಿ ಎನ್ನುವುದು ಒಂದು ಉದ್ಯಮವಾಗಿ ಪರಿವರ್ತನೆಯಾದರೂ ಅದು ತನ್ನ ಪಾವಿತ್ರತೆಯನ್ನು ಕಾಯ್ದುಕೊಂಡು ಬಂದಿದೆ. ಅವಕಾಶಗಳು ಎಲ್ಲರಿಗೂ ಸಿಗಬಹುದು. ಆದರೆ ಯಾವುದನ್ನು ಆಯ್ಕೆಮಾಡಿಕೊಳ್ಳುತ್ತೇವು ಎನ್ನುವುದು ಮುಖ್ಯವಾಗುತ್ತದೆ ಎಂದರು.
ಕಲಬುಗರ್ಿಯ ಯುವ ರಂಗ ಕಲಾವಿದ ರಾಘವೇಂದ್ರ ಹಳೆಪೇಟೆ ಶ್ರೇಷ್ಠ ಕಲಾವಿದನಾಗಬೇಕಾದರೆ ಏನಿರಬೇಕು? ಎಂಬ ಪ್ರಶ್ರೆಗೆ ಉತ್ತರಿಸುತ್ತಾ ಶಿಸ್ತು ಎನ್ನುವುದು ಸತ್ಯ. ಅದು ಯಾವಾಗಲು ಸಿಂಪಲ್. ವಿನಯವಾದ ಸತ್ಯವನ್ನು ರಾಡಿಮಾಡಿ ಹಾಕಿದ್ದಾರೆ. ನಾವು ರಾಡಿ ಮಾಡದೇ ಮೌನವಾಗಿರುವುದು ಶ್ರೇಷ್ಟ ಎಂಬ ಕಾಲಕ್ಕೆ ಬಂದು ನಿಂತಿದ್ದೇವೆ. ಕಲಾವಿದನಾದವನು ಸಮಾಜದ ಋಣ ತೀರಿಸುವುದೇ ಕಲಾವಿದನ ಆದ್ಯಕಾರ್ಯವಾಗಬೇಕು. ಯಾವಾಗಲೂ ಕಲಾವಿದ ಕೊಡುಕೊಳ್ಳುವಿಕೆಯಲ್ಲಿ ಪಾವಿತ್ರ್ಯವನ್ನು ಕಾಪಾಡಿಕೊಂಡು ಬರಬೇಕು. ಅಂದಾಗ ಒಬ್ಬ ಶ್ರೇಷ್ಠ ಕಲಾವಿದನಾಗುವನು ಎಂದು ಹೇಳಿದರು.
ರಂಗಭೂಮಿ ಯಾವಾಗಲು ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಪ್ರತಿಭಟಿಸುವ ಒಂದು ಪ್ರಭಲ ಮಾಧ್ಯಮ. ಈ ರಂಗಭೂಮಿಗೆ ಯಾರೂ ಹೋಗಲು ಒತ್ತಾಯಿಸುವುದಿಲ್ಲ ಸ್ವಯಂ ಪ್ರೇರಣೆಯಿಂದಲೇ ಇದನ್ನು ಆಯ್ದುಕೊಳ್ಳಲಾಗುತ್ತದೆ. ಹೀಗಾಗಿ ಬದ್ಧತೆ ಹೊಂದಲೇಬೇಕಾಗುತ್ತದೆ ಎಂದು ಜನಾರ್ಧನ(ಜನ್ನಿ) ಮಾತನಾಡಿದರು.
ರಂಗಭೂಮಿ ಎನ್ನುವುದು ವಿಜ್ಞಾನ. ಎಲ್ಲವನ್ನು ಒರೆಗೆ ಹಚ್ಚಿ ನೋಡುವ ಮತ್ತು ತಿಳಿಸುವ ಪ್ರಕ್ರಿಯೆ ರಂಗಭೂಮಿಯಲ್ಲಿ ನಿರಂತರ ನಡೆಯುವಂತಹದ್ದು, ಹೀಗಾಗಿ ಯಾವಾಗಲೂ ರಂಗಭೂಮಿ ಒಂದು ವಿಜ್ಞಾನದ ರಂಗವಾಗಿ ಗೋಚರವಾಗುತ್ತದೆ ಎಂದು ಹಿರಿಯ ರಂಗಕಲಾವಿದೆ ರಜನಿ ಗರುಡ ಯುವ ರಂಗ ಕಲಾವಿದರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡುತ್ತಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಜನಾರ್ಧನ(ಜನ್ನಿ), ಬಿ.ಐ. ಈಳಗೇರ, ಮಹದೇವ ಹಡಪದ ಯುವ ಕಲಾವಿದರೊಂದಿಗೆ ಸಂವಾದ ಮಾಡಿದರು. ಸಿದ್ದರಾಮ ಹಿಪ್ಪರಗಿ, ಎಂ.ಎಂ. ಚಿಕ್ಕಮಠ, ಪ್ರಕಾಶ ಬಾಳಿಕಾಯಿ, ರಮೇಶ ಉಳ್ಳಾಗಡ್ಡಿ, ಮಹಾಂತೇಶ ನಾಡಗೌಡ, ಸುನಂದ ನಿಂಬನಗೌಡರ ಉಪಸ್ಥಿತರಿದ್ದರು. ಶಂಕರ ಹಲಗತ್ತಿ ಕಾರ್ಯಕ್ರಮ ನಡೆಸಿಕೊಟ್ಟರು.