ನಾವು ಸುಸಂಸ್ಕೃತರಾಗಲು ಸಾಂಸ್ಕೃತಿಕ ಸಂಘಟನೆಗಳು ಕಾರಣ : ಡಾ. ಶ್ರೀರಾಮ ಇಟ್ಟಣ್ಣವರ
ಬೀಳಗಿ 16: ನಾವು ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಿದಾಗ ಸಂಘಟನೆಗಳು ಬಹಳಷ್ಟಿರಲಿಲ್ಲ. ಸಾಂಸ್ಕೃತಿಕ ಆಯಾಮಗಳು ಬದುಕಿನಲ್ಲಿ ಅಳವಡಿಸಿಕೊಂಡಷ್ಟು ನಾವು ಸುಸಂಸ್ಕೃತರಾಗುತ್ತೇವೆ. ನಾವು ಸುಸಂಸ್ಕೃತರಾಗಲು ಸಾಂಸ್ಕೃತಿಕ ಸಂಘಟನೆಗಳು ಕಾರಣ ಎಂದು ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಹೇಳಿದರು. ಪಟ್ಟಣದ ಗಾಂಧಿ ನಗರದಲ್ಲಿರುವ ತಮ್ಮ ಪಾರಿಜಾತ ನಿವಾಸದಲ್ಲಿ ಕನ್ನಡ ಜಾನಪದ ಪರಿಷತ್ ಬೀಳಗಿ ತಾಲೂಕಾ ಘಟಕದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಇರುವವರಿಗೆ ಜಾತಿ ಇರುವದಿಲ್ಲ. ಬಡವ, ಬಲ್ಲಿದ ಎಂಬ ಭೇದಭಾವ ಇರುವದಿಲ್ಲ. ಕೇವಲ ಮನುಷ್ಯ ಸಂಬಂಧಗಳು ಮಾತ್ರ ಇರುತ್ತವೆ ಎಂದರು. ಈ ಕಾರಣದಿಂದ ನಾವು ಸಾಂಸ್ಕೃತಿಕ ಲೋಕವನ್ನು ವಿಸ್ತರಿಸಿಕೊಳ್ಳುತ್ತಿದ್ದೇವೆ. ಸಾಂಸ್ಕೃತಿಕ ಸಂಗಟನೆಗಳ ಚಟುವಟಿಕೆಗಳು ಬದುಕಿನಲ್ಲಿ ಒಂದು ಅನಿವಾರ್ಯವಾದಂಥಹ ಒಂದು ರೀತಿ. ಹೆಚ್ಚೆಚ್ಚು ಜನರು ತೊಡಗಿದಷ್ಟು ಬದುಕು ಪ್ರಬುದ್ಧವಾಗುತ್ತದೆ. ತಮ್ಮ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿದೆ ಎಂದು ಹೇಳಿದರು. ಕರ್ನಾಟಕ ಸಾಹಿತ್ಯ ಆಕಾಡೆಮಿ ಗೌರವ ಪ್ರಶಸ್ತಿ ನೀಡಿದ ಪ್ರಯುಕ್ತ ಕನ್ನಡ ಜಾನಪದ ಪರಿಷತ್ ಬೀಳಗಿ ತಾಲೂಕಾ ಘಟಕದವತಿಯಿಂದ ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಎಂ. ಸಾವಕಾರ, ತಾಲೂಕಾಧ್ಯಕ್ಷ ಬಸವರಾಜ ದಾವಣಗೆರೆ, ತಾಲೂಕು ಘಟಕದ ಪದಾಧಿಕಾರಿಗಳಾದ ಬಸವರಾಜ ನಾಯ್ಕ, ಪ್ರಕಾಶ ಸುಣಗಾರ, ಸರೋಜಿನಿ ಕುಂಬಾರ, ಕಸ್ತೂರಿ ಪತ್ತಾರ, ಹೆಚ್. ಬಿ. ಮಾಳಗೊಂಡ, ಗಿರಿಸಾಗರ ವಲಯ ಘಟಕದ ಅಧ್ಯಕ್ಷ ಶ್ರೀಕಾಂತ ಸಂದಿಮನಿ, ಕುಂದರಗಿ ವಲಯ ಘಟಕದ ಅಧ್ಯಕ್ಷ ಪಾಂಡಪ್ಪ ಕನಸಗೇರಿ, ನ್ಯಾಯವಾದಿ ಸಂತೋಷ ಸಜ್ಜನ, ಶಿಕ್ಷಕರಾದ ಬಸವಂತಪ್ಪ ಮಾಳಗೊಂಡ, ಬಿ. ಹರದೊಳ್ಳಿ, ನೀಲಕಂಠ ಜಂಬಗಿ, ನಂದು ಸಾರಾವರಿ, ಬಸು ವಾಲಿಕಾರ, ಮೌನೇಶ ಕಂಬಾರ, ಸಚಿನ್ ಮುಂತಾದವರು ಉಪಸ್ಥಿತರಿದ್ದರು.