ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಬೆಳೆಸಿ: ಬಸವಲಿಂಗ ಶ್ರೀ
ದೇವರಹಿಪ್ಪರಗಿ, 18; ಮಕ್ಕಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ವಿಜಯಪುರ ಜ್ಞಾನ ಯೋಗ ಆಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ಬಸವಲಿಂಗ ಮಹಾಸ್ವಾಮೀಜಿಗಳು ಹೇಳಿದರು. ಪಟ್ಟಣದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಹಾಗೂ ಮಕ್ಕಳ ಕಲರವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ನಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ, ಅಪ್ಪಟ ಭಾರತೀಯ ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ಸಂಬಂಧ ಹಾಗೂ ಮಾನವೀಯ ಗುಣ ವೌಲ್ಯಗಳನ್ನು ರೂಢಿಸಬೇಕಿದೆ, ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬಿತ್ತುತ್ತಿರುವ ಸಿದ್ದೇಶ್ವರ ಸ್ವಾಮೀಜಿ ಹೆಸರಿನ ಸಂಸ್ಥೆಯಲ್ಲಿ ಮಕ್ಕಳು ಕಲಿತು ಹಲವಾರು ಉನ್ನತ ಉದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯಕ. ವಿದ್ಯಾರ್ಥಿಗಳು ಉತ್ತಮ ಜೀವನ ಕಟ್ಟಿಕೊಂಡು ತನ್ನ ತಂದೆ ತಾಯಿಗಳ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವುದು, ದೇಶದ ಸಂಸ್ಕೃತಿಗೆ ಗೌರವ ನೀಡುವಂತಹ ಸಂಸ್ಕಾರವಂತ ಶಿಕ್ಷಣ ಪಡೆದುಕೊಂಡು ಒಬ್ಬ ಉತ್ತಮ ನಾಗರಿಕನಾಗಬೇಕು. ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಉನ್ನತ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಪಡೆದು ತಾವು ಕಲಿತ ಸಂಸ್ಥೆಗೆ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸಬೇಕೆಂದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ರಿಯಾಜ್ ಯಲಗಾರ ಹಾಗೂ ಮಲ್ಲಿಕಾರ್ಜುನ ಕಲ್ಲೂರ ಅವರು ಮಾತನಾಡಿ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಆಗುತ್ತೆ,ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಸಮನ್ವಯದಿಂದ ಕೆಲಸ ಮಾಡುತ್ತಿರುವುದರಿಂದ ಶಾಲೆ ಸರ್ವಾಂಗೀಣ ಅಭಿವದ್ಧಿ ಸಾಧಿಸಿದೆ. ಮಕ್ಕಳು ಶಾಲೆಯ ಸದುಪಯೋಗ ಪಡೆದುಕೊಂಡು ಉತ್ತಮ ಪ್ರಜೆಗಳಾಗಲು ಶುಭ ಕೋರಿದರು.ಸಾನಿಧ್ಯವನ್ನು ಸದಯ್ಯನ ಮಠದ ಶ್ರೀ ಷ.ಬ್ರ. ವೀರಗಂಗಾಧರ ಶಿವಾಚಾರ್ಯರು ವಹಿಸಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಜಯಶ್ರೀ ಕೆ ಪಾಟೀಲ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಸಂಸ್ಥಾಪಕರಾದ ವ್ಹಿ.ಕೆ. ಪಾಟೀಲ ಅವರು ಮಾತನಾಡಿ, ಪ.ಪೂ.ಲಿಂ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆ ನಡೆದು ಬಂದ ಹಾದಿ, ಸಹಕಾರ ನೀಡಿದ ಮಹಾನಿರನ್ನು ನೆನಪಿಸಿದರು ಹಾಗೂ ಸಂಸ್ಥೆಯಲ್ಲಿ ಕಲೆತ ವಿದ್ಯಾರ್ಥಿಗಳು ದೇಶ, ರಾಜ್ಯ ಹಾಗೂ ವಿವಿಧ ರಾಜ್ಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ, ಹೆಚ್ಚು ಅಂಕ ಪಡೆದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಕ್ಕಳ ಕಲರವ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಇದೇ ಸಂದರ್ಭದಲ್ಲಿ ಕೆ.ಎಸ್.ಪಾಟೀಲ, ಸೌಮ್ಯ. ಎಂ.ಕಲ್ಲೂರ, ಆಯ್.ಎಸ್.ನರೂಣಿ, ಎಂ.ಎಸ್. ಸ್ಥಾವರಮಠ, ಪತ್ರಕರ್ತರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರೇಷ್ಮಾ ಜಾಧವ, ಎಸ್.ಕೆ. ಪಾಟೀಲ, ವಾಯ್.ಜೆ. ಬೋಳೆಗಾಂವ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.