ಕ್ರಿಕೆಟ್ ಪಂದ್ಯಾವಳಿ: ಅಥಣಿಯ ಲೈಫ್ ಸೇವಿಯರ್ಸ್ ತಂಡಕ್ಕೆ ಗೆಲುವು
ಚಿಕ್ಕೋಡಿ 26: ಆರೋಗ್ಯ ಇಲಾಖೆಯ ಸಿಬ್ಬಂದಿಯು ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಚಿಕ್ಕೋಡಿಯ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಕ್ರೀಡೆಯಲ್ಲಿ ಪ್ರತಿಯೊಬ್ಬರು ಉತ್ಸಾಹದಿಂದ ಭಾಗವಹಿಸಿ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಡಿಎಚ್‌ಓ ಡಾ. ಎಸ್.ಎಸ್. ಗಡೇದ ಹೇಳಿದರು.
ಇಲ್ಲಿನ ಆರ್‌ಡಿ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ಹಮ್ಮಿಕೊಂಡ ಹೆಲ್ತ್ ಪ್ರಿಮಿಯರ್ ಲಿಗ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಆರೋಗ್ಯ ಇಲಾಖೆಯಿಂದ ಆಯೋಜನೆ ಮಾಡುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೆಚ್ಚು ಹೆಚ್ಚು ತಂಡಗಳು ಭಾಗವಹಿಸುತ್ತಿವೆ. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯ ಅಧೀಕ್ಷಕ ನವೀನ ಗಂಗರೆಡ್ಡಿ ಮಾತನಾಡಿ, ಕ್ರಿಕೆಟ್, ಬ್ಯಾಡ್ಮಿಂಟನ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಚೇರಿಯಿಂದ ಆಗಾಗ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ತಮ್ಮ ಬಿಡುವಿಲ್ಲದ ಸಮಯದಲ್ಲಿ ಬಿಡುವು ಮಾಡಿಕೊಂಡು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಜನರಿಗೆ ಉತ್ತಮ ಸೇವೆ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಆರೋಗ್ಯದಿಂದ ಇರಬೇಕೆಂಬುವುದು ಪಂದ್ಯಾವಳಿಯ ಉದ್ದೇಶವಾಗಿದೆ ಎಂದರು.
ಡಾ. ಸಂತೋಷ ಕೊಣ್ಣೂರೆ, , ಡಾ. ಶಾಂತಾರಾಮ ಬಾಗೇವಾಡಿ, ಆರೋಗ್ಯ ಸಹಾಯಕರ ರಾಜ್ಯ ಅಧ್ಯಕ್ಷ ಬಿ.ಎ. ಕುಂಬಾರ, ನೌಕರರ ಸಂಘದ ನಿರ್ದೇಶಕರಾದ ರಾಜು ದತ್ತವಾಡೆ, ರಮೇಶ ದೊಡಮನಿ, ಆರ್.ಎಸ್.ಹಳೆಮನಿ, ಗೀರೀಶ ಕುಲಕರ್ಣಿ, ಜಗದೀಶ ಗಣಾಚಾರಿ, ಸಂತೋಷ ತಾವದಾರೆ, ರಾಜು ದತ್ತವಾಡ, ಚಿದಾನಂದ ಕಲಾದಗಿಮಠ, ಜಗದೀಶ ಹುಲಕುಂದ, ಸೋಮನಾಥ ಪೂಜೇರಿ, ಶ್ರೀನಿವಾಸ ನಾಯಿಕ ಮುಂತಾದವರು ಭಾಗವಹಿಸಿದ್ದರು.
ಅಥಣಿಯ ಲೈಫ್ ಸೇವಿಯರ್ಸ್ ತಂಡಕ್ಕೆ ಗೆಲುವು: ಎರಡು ದಿನಗಳ ಕಾಲ ನೆಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಟು ತಾಲೂಕುಗಳಿಂದ 15 ತಂಡಗಳು ಭಾಗವಹಿಸಿದ್ದವು. ಅಥಣಿಯ ಲೈಫ್ ಸೇವಿಯರ್ಸ್ ತಂಡ ಹಾಗೂ ರಾಯಬಾಗದ ರಾಯಲ್ ರಾಂಪಜ್ ತಂಡ ಫೈನಲ್ ಪ್ರವೇಶಿಸಿದ್ದವು. 6 ಓವರ್‌ಗಳ ಪಂದ್ಯದಲ್ಲಿ ಅಥಣಿ ತಂಡ ವಿಜೇತವಾಗಿದ್ದು, ರಾಯಬಾಗ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಸರಣಿ ಶ್ರೇಷ್ಠರಾಗಿ ಹಾಗೂ ಪಂದ್ಯ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಆಗಿ ಡಾ. ಮಂಜುನಾಥ, ಶ್ರೇಷ್ಠ ಬಾಲರ್ ಆಗಿ ವಿಕ್ರಮ್. ಪಂದ್ಯ ಶ್ರೇಷ್ಠರಾಗಿ ರಫೀಕ ಮುಜಾವರ್ ಹೊರ ಹೊಮ್ಮಿದ್ದಾರೆ. ಗೆಲುವು ಸಾಧಿಸಿದ ಹಾಗೂ ರನ್ನರ್ ಅಪ್ ತಂಡಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.