ಲೋಕದರ್ಶನ ವರದಿ
ಕಾಗವಾಡ, ಜುಲೈ 09: ಕೊರೊನಾ ಮಹಾಮಾರಿ ಈಗ ಕಾಗವಾಡ ತಾಲೂಕಿನ ಕೆಲ ಹಳ್ಳಿಗಳಲ್ಲಿ ಒಕ್ಕರಿಸಿದ್ದು, ಇಂದು ಐನಾಪುರ ಪಟ್ಟಣದ ಓರ್ವ ಯುವಕನಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಓರ್ವ ವೈದ್ಯ ಸೇರಿ 10 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಕಾಗವಾಡ-ಐನಾಪುರ ಮಾರ್ಗದ ಐನಾಪುರ ಪಟ್ಟಣದಲ್ಲಿ ಓರ್ವ ಖ್ಯಾತ ವೈದ್ಯನ ಬಳಿ ಯುವಕನು ಆರೋಗ್ಯ ತಪಾಸಣೆ ಮಾಡಿಕೊಂಡಿದ್ದಾನೆ. ಈತನು ಇತ್ತಿಚಿಗೆ ಕೆಲಸದ ನಿಮಿತ್ಯ ಧಾರವಾಡಕ್ಕೆ ಹೋಗಿ ಬಂದಿದ್ದಾನೆ. ಈತನಿಗೆ ಕೆಲ ಕಾಯಿಲೆಗಳು ಕಾಣಿಸಿಕೊಂಡಿದ್ದರಿಂದ ವೈದ್ಯರ ಬಳಿ ಹೋಗಿದ್ದನು. ಈತನ ರಕ್ತ ತಪಾಸಣೆ ಇದೇ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ವೈದ್ಯರು ಸೇರಿ ಅವರ ಸಿಬ್ಬಂದಿ, ರಕ್ತ ತಪಾಸಣೆ ಮಾಡಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಪಿಎಸ್ಐ ಹನುಮಂತ ಧರ್ಮಟ್ಟಿ, ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುನದಕಲ, ಐನಾಪುರ ಪಟ್ಟಣ ಪಂಚಾಯತಿ ಅಧಿಕಾರಿ ಎ.ಆರ್.ಕುಲಕಣರ್ಿ, ಸೇರಿ ಇನ್ನೀತರ ಸಿಬ್ಬಂದಿಗಳು ಸೋಂಕಿತ ಯುವಕನನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಉಪಚಾರಿಸಲು ಆ್ಯಂಬುಲೆನ್ಸ್ ಮುಖಾಂತರ ಸಾಗಿಸಿದ್ದಾರೆ.
ಐನಾಪುರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೆಲ ಅಧಿಕಾರಿಗಳು ಹೇಳಿದರು. ಈಗಾಗಲೇ ಲೋಕುರ, ಶೇಡಬಾಳ, ಜುಗೂಳ ಗ್ರಾಮಗಳಲ್ಲಿ ಸೋಂಕಿತರು ಕಂಡುಬಂದಿದ್ದು, ಬೆಳಗಾವಿಯಲ್ಲಿ ಉಪಚಾರಿಸಿಕೊಳ್ಳುತ್ತಿದ್ದಾರೆ.