ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಜೋಳದ ರಾಶಿ ಸಂಭ್ರಮ
ದೇವರಹಿಪ್ಪರಗಿ 09: ಗೂಡು ಮುರಿದು, ಜೋಳದ ತೆನೆಗಳ ಗುಡ್ಡೆಹಾಕಿ, ಜೋಡೆತ್ತಿನ ಹಂತಿಹೂಡಿ ಜಾನಪದ ಸೊಗಡಿನ ಹಂತಿಪದಗಳನ್ನು ಹಾಡಿ ಹಾರಕೂಡ ಬಸವನ ಬಾಗೇವಾಡಿಯ ಮಹಾಂತನ ಮಠದ ಒಡೆಯರ ಶಿವಪ್ರಕಾಶ ಶಿವಾಚಾರ್ಯರ ನೇತೃತ್ವದಲ್ಲಿ ರವಿವಾರ ರಾತ್ರಿ ಜೋಳದ ರಾಶಿ ನಡೆಯಿತು.
ಪಟ್ಟಣದ ವೀರಭದ್ರೇಶ್ವ ನೂತನ ಮೂರ್ತಿ ಪ್ರತಿಷ್ಠಾಪನದ ನಂತರ 12ನೇ ಕಾರ್ತಿಕೋತ್ಸವದ ಸಂಭ್ರಮದ ಪ್ರಯುಕ್ತ ನಡೆಯುತ್ತಿರುವ ಮಹಾ ದಾಸೋಹಿ ಕಲಬುರಗಿಯ ಶರಣಬಸವೇಶ್ವರರ ಪುರಾಣದಲ್ಲಿ ಬರುವ ಜೋಳದ ರಾಶಿಯ ಅಧ್ಯಾಯವನ್ನು ಶಿವಾಚಾರ್ಯ ನೇತೃತ್ವದಲ್ಲಿ ಜೋಳದ ರಾಶಿಯ ಕುರಿತು ಜ್ಞಾನ ದಾಸೋಹವನ್ನು ಉಣಬಡಿಸಿದರು.ದೇವಸ್ಥಾನದ ಆವರಣದಲ್ಲಿ ಸಮಿತಿಯ ಅಧ್ಯಕ್ಷರಾದ ಚನ್ನವೀರ್ಪ ಕುದರಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ರೈತ ಮುಖಂಡರು ಹಾಗೂ ರೈತರು ಜೋಳದ ಕಣ ನಿರ್ಮಿಸಿ ಮಧ್ಯದಲ್ಲಿ ಮೇಟಿ ಹೂಡಿ ಅದಕ್ಕೆ ಜೋಳದ ತೆನೆಗಳನ್ನು ಕಟ್ಟಲಾಗಿತ್ತು. ಭಕ್ತರು ಮನೆಯಿಂದ ಬರುವಾಗ ಜೋಳದ ತೆನೆ, ಪುಟ್ಟಿ, ಪಾತ್ರೆಗಳಲ್ಲಿ ಜೋಳವನ್ನು ತಂದು ಕಣದಲ್ಲಿ ಹಾಕಿದರು. ಅದರಲ್ಲಿ ಜೋಡೆತ್ತುಗಳಿಗೆ ಹಂತಿ ಹೂಡಿ ಹಲವು ಸುತ್ತು ತಿರುಗಿದವು.ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಬಸವೇಶ್ವರ ಹಂತಿ ಪದ ಸಂಘ ಹಾಗೂ ಸ್ಥಳೀಯ ಮುಖಂಡರಾದ ಶಿವಪ್ಪ ಬಾವಿಮನಿ, ಕಲ್ಲಣ್ಣ ಜಲಕತ್ತಿ, ಶರಣಪ್ಪ ಕೋಟಿನ್, ಗೊಲ್ಲಾಳ ಅವಟಿ, ಮಲ್ಲಪ್ಪ ಸೌದಿ, ಶಿವಾನಂದ ದಾನಗೊಂಡ, ಪರಸಪ್ಪ ಮಂಗಳೂರ ಸೇರಿದಂತೆ ರೈತರು ಹುಮ್ಮಸ್ಸಿನಿಂದ ಕೂಡಿಕೊಂಡು ವಿಜೃಂಭಣೆಯಿಂದ ಹಂತಿ ಪದಗಳನ್ನು ಆಡುತ್ತ ಸಂಭ್ರಮಕ್ಕೆ ನೆರವು ನೀಡಿದರು.ಸಾಂಪ್ರದಾಯಿಕ ನೃತ್ಯ, ಕಂಬಳಿ, ಕೊಡಲಿ, ಜರದಾರಿ ರೇಷ್ಮೆಯ ರುಮಾಲು ಜೋಳದ ರಾಶಿ ಕಣದಲ್ಲಿ ಆಕರ್ಷಿಸಿದವು.ಭಕ್ತರಿಂದ ಸಾವಿರಾರು ರೂಪಾಯಿ ಹಣ ಕಾಣಿಕೆ ಸಂಗ್ರಹವಾಯಿತು.ರಾಶಿಯಲ್ಲಿ 25 ಕಟ್ಟಾ ಜೋಳ ಸಂಗ್ರಹವಾಯಿತು. ಕಾರ್ಯಕ್ರಮದಲ್ಲಿ ಗವಾಯಿ ಶರಣಕುಮಾರ ಯಾಳಗಿ, ತಬಲ ವಾದಕರಾಗಿ ನಾಗರಾಜ ಹುಣಸಿಗಿಡದ ಸಾತ ನೀಡಿದರು.ಪಟ್ಟಣದ ಪರದೇಶಿ ಮಠದ ಪ.ಪಂ ಶಿವಯೋಗಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಗಣ್ಯರು, ಮಹಿಳೆಯರು ಹಾಗೂ ಇತರರು ಉಪಸ್ಥಿತರಿದ್ದರು.