ನಿರಂತರ ಅಧ್ಯಯನಶೀಲತೆ ವಿದ್ಯಾರ್ಥಿಯ ಸವಾಂರ್ಗೀಣ ಬೆಳವಣಿಗೆಗೆ ಕಾರಣ-ಡಾ. ಅಜಿತ ಪ್ರಸಾದ
ಧಾರವಾಡ 17: ಜನತಾ ಶಿಕ್ಷಣ ಸಮಿತಿಯು ಉತ್ತರ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಮನೆಮಾತಾಗಿರುವ ಈ ಸಂಸ್ಥೆಯ 25ನೇ ಅಂಗಸಂಸ್ಥೆಯೇ ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಮಹಾವಿದ್ಯಾಲಯ. ಉಜ್ವಲ ಭವಿಷ್ಯದ ಸಂಕಲ್ಪ ಹೊತ್ತು ಬಂದ ಸಾವಿರಾರು ವಿದ್ಯಾರ್ಥಿಗಳ ಆಶಾಕಿರಣವಾಗಿ ಎಂ.ಸಿ.ಎ. ಅಧ್ಯಯನ ಸಂಸ್ಥೆ ಇಂದು ಉದ್ಘಾಟನೆಗೊಂಡಿರುವುದು ಜನತಾ ಶಿಕ್ಷಣ ಸಮಿತಿಯ ಹೆಮ್ಮೆಯಾಗಿದೆ ಎಂದು ನೂತನ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಅಧ್ಯಯನ ಸಂಸ್ಥೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನಿರಂತರ ಅಧ್ಯಯನಶೀಲತೆ ಮತ್ತು ಶಿಸ್ತುಬದ್ಧ ಜೀವನವು ವಿದ್ಯಾರ್ಥಿಯ ಸವಾಂರ್ಗೀಣ ಬೆಳವಣಿಗೆಗೆ ಕಾರಣವಾಗುತ್ತದೆ. ಪಠ್ಯಕ್ರಮದ ಜೊತೆ ಜೊತೆಗೆ ಪ್ರಚಲಿತ ವಿದ್ಯಮಾನಗಳ ಅರಿವು ವಿದ್ಯಾರ್ಥಿಗಳಿಗೆ ಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಮ್ಮ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಗ್ರಂಥಾಲಯವನ್ನು ಆರಂಭಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಈ ಲೈಬ್ರರಿ ಅನುಕೂಲವಾಗಲಿದೆ. ಜೊತೆಗೆ ಅಂತರ್ಜಾಲ ಆಧಾರಿತ ಸಾವಿರಾರು ಇ-ಪುಸ್ತಕಗಳು ಸಹ ಲಭ್ಯವಿದ್ದು ವಿದ್ಯಾರ್ಥಿಗಳು ಸದಸ್ಯತ್ವವನ್ನು ಪಡೆದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ, ಕ್ರೀಡೆ, ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ ತರಬೇತಿ, ವಿವಿಧ ಉದ್ಯೋಗಗಳಿಗೆ ಅನುಕೂಲವಾಗುವ ವೃತ್ತಿಪರ ಸರ್ಟಿಫಿಕೆಟ್ ಕೋರ್ಸಗಳನ್ನು, ಕ್ಯಾಂಪಸ್ ಸಂದರ್ಶನಕ್ಕೆ ತರಬೇತಿ ನೀಡಲಾಗುವುದು. ಎಂ.ಸಿ.ಎ. ಅಧ್ಯಯನ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸುಸಜ್ಜಿತ ವರ್ಗಕೋಣೆಗಳು, ಹೈಟೆಕ್ ಕಂಪ್ಯೂಟರ್ ಲ್ಯಾಬ್, ವೈಫೈ ಸೌಲಭ್ಯ ಮತ್ತು ನುರಿತ ಅಧ್ಯಾಪಕ ವೃಂದವನ್ನು ಒಳಗೊಂಡದ್ದು ಈ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಸಮಯ ಪಾಲನೆ, ಶಿಸ್ತು, ನೈತಿಕ ಮೌಲ್ಯಗಳ ಬೆಳೆಸಿಕೊಂಡು ಸಾಧನೆಯ ಪ್ರಭೆಯಲ್ಲಿ ಮಿನುಗಿ ಕೀರ್ತಿವಂತರಾಗಿರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪದವಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್ ನೀಡುವ ಮೂಲಕ ಮಹಾವಿದ್ಯಾಲಯಕ್ಕೆ ಸ್ವಾಗತಿಸಲಾಯಿತು. ಎಂ.ಸಿ.ಎ. ಅಧ್ಯಯನ ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗದವರಿಗೆ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಸವಿ ನೆನಪಿನ ಕಾಣಿಕೆಯನ್ನು ನೀಡಿ ಶುಭಕೋರಿದರು.
ಡಾ. ಸೂರಜ್ ಜೈನ್ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಬಾಹುಬಲಿ ಪರಿಚಯಿಸಿದರು. ಶ್ರೀಮತಿ ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ. ಮಹಾಂತ ದೇಸಾಯಿ ನಿರೂಪಿಸಿದರು. ಪ್ರೊ. ಮಂಜುನಾಥ ಪೂಜಾರ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಕೆ. ಎಚ್. ನಾಗಚಂದ್ರ, ಡಾ. ಶಿವಪ್ರಸಾದ, ಪ್ರೊ.ಮಂಜುಳಾ ಕಲ್ಮಠ, ಡಾ. ಬಸವರಾಜ ಜಿ., ಪ್ರೊ. ಚಂದ್ರು ಜಟಾರ ವಿದ್ಯಾರ್ಥಿಗಳು ಮತ್ತು ಪಾಲಕರು ಇತರರು ಉಪಸ್ಥಿತರಿದ್ದರು.