ರೋಗ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಿರಿಧಾನ್ಯ ಆಹಾರಗಳ ಸೇವನೆ ಮುಖ್ಯ: ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ

ರೋಗ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಿರಿಧಾನ್ಯ ಆಹಾರಗಳ ಸೇವನೆ ಮುಖ್ಯ: ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ Consumption of whole grains is important for disease control and weight balance: Joint Director Man

ಧಾರವಾಡ ಡಿ.23:  ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಯವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿವೆ. ಈ ಆಹಾರಗಳ ಲಾಭ ಉಪಯಕ್ತತೆ ಮತ್ತು ಬಳಕೆ ಕುರಿತಂತೆ ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹಳ ಮುಖ್ಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಹೇಳಿದರು. 

ಅವರು ಇಂದು (ಡಿ.23) ಬೆಳಿಗ್ಗೆ ಕೃಷಿ ಇಲಾಖೆಯಿಂದ ಆಯೋಜಿಸದ್ದ ಸಿರಿಧಾನ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕಲಾಭವನ ಆವರಣದಲ್ಲಿ ಚಾಲನೆ ನೀಡಿ, ಮಾತನಾಡಿದರು. 

ನಮ್ಮಲ್ಲಿ ಪ್ರಚಲಿತವಿರುವ ಸಜ್ಜೆ, ನವಣೆ, ಸಾವೆ, ರಾಗಿ, ಹಾರಕ, ಬರಗು, ಕೊರಲೆ, ಊದಲು ಮುಂತಾದ ಸಿರಿಧಾನ್ಯಗಳು ನಾರಿನಂಶ ಮತ್ತು ಇತರೆ ಆರೋಗ್ಯ ಸಂಬಂಧಿ ಪೋಷಕಾಂಶಗಳನ್ನು ಒಳಗೊಂಡಿದ್ದು ಸದೃಡ ಆರೋಗ್ಯಕ್ಕಾಗಿ ಇವುಗಳ ಬಳಕೆಯ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. ಸಿರಿಧಾನ್ಯಗಳನ್ನು ಸಾಧಾರಣ ಫಲವತ್ತತೆಯ ಭೂಮಿಯಲ್ಲಿ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲದೆ ಬೆಳೆಯಬಹುದಾಗಿದ್ದು, ಇನ್ನಿತರ ಪರಿಕರಗಳ ಅವಶ್ಯಕತೆ ಇರುವದಿಲ್ಲ ಎಂದು ಹೇಳಿದರು. 

ಕಡಿಮೆ ಖರ್ಚಿನಲ್ಲಿ ಸುಲಭ ನಿರ್ವಹಣೆಯೊಂದಿಗೆ ಬೆಳೆಯಬಹುದಾದ ಸಿರಿಧಾನ್ಯಗಳು ಪ್ರಸ್ತುತ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಒಳಗೊಂಡಂತೆ ರೈತ ಸಮೂದಾಯಕ್ಕೆ ವರದಾನವಾಗಿವೆ. ಇವುಗಳ ವಿಸ್ತೀರ್ಣವನ್ನು ಹೆಚ್ಚಿಸುವದರೊಂದಿಗೆ ಗ್ರಾಹಕರ ಬಳಕೆಗೆ ಸೂಕ್ತವಾಗುವಂತೆ ಸಂಸ್ಕರಣೆ ಮಾಡುವದು ಅತ್ಯಂತ ಅವಶ್ಯಕ ಸಂಗತಿಯಾಗಿದೆ. ಈ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಧಾರವಾಡದ ಶಹರದಲ್ಲಿ ಕೃಷಿ ಇಲಾಖೆಯಿಂದ ವಾಕ್ ಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

ಸಿರಿಧಾನ್ಯಗಳ ಸಾಗುವಳಿ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಗ್ರಾಹಕರ ಬಳಕೆ ಕುರಿತಂತೆ ಸಾಕಷ್ಟು ಮಾಹಿತಿಯನ್ನು ಮತ್ತು ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. 

ಸಿರಿಧಾನ್ಯ ಉತ್ಪನ್ನಗಳ ಕುರಿತು ಉತ್ಪಾದಕರು ಮತ್ತು ಬಳಕೆದಾರರು ಇಬ್ಬರಲ್ಲೂ ಸಾಕಷ್ಟು ತಿಳುವಳಿಕೆ ಮೂಡಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ದೊರೆತಿದೆ. ಸಿರಿಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರದ ಬಹುಮುಖ್ಯ ಭಾಗವಾಗಿದ್ದು, ಆಧುನಿಕ ಜೀವನ ಶೈಲಿಗೆ ತಕ್ಕಂತೆ ಹೊಸ ವಿಧದ ಖಾದ್ಯಗಳನ್ನು ತಯಾರಿಸುವದಕ್ಕೆ ಪ್ರೋತ್ಸಾಹದ ಅಗತ್ಯವಿದೆ ಎಂದು ಅವರು ತಿಳಿಸಿದರು. 

ಬೆಳೆ ಉತ್ಪಾದನೆಯಾಚೆಗಿನ ಕೃಷಿ-ರೈತರ ಸಬಲೀಕರಣ ಎಂಬ ವಾಕ್ಯದೊಂದಿಗೆ ಸಿರಿಧಾನ್ಯ ಬಳಕೆ ಕುರಿತು ಜಾಗೃತಿ ನಡಿಗೆಯ ಜಾಥಾ ಕಾರ್ಯಕ್ರಮವನ್ನು ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಿಂದ ಕೆ.ಸಿ.ಡಿ ವೃತ್ತದವರೆಗೆ ಆಯೋಜಿಸಲಾಗಿತ್ತು ಎಂದು ತಿಳಿಸಿದರು. 

ಜನಜಾಗೃತಿ ಜಾಥಾ ನಡಿಗೆಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ  ಶ್ರೀಪಾದ ಕುಲಕರ್ಣಿ, ಉಪ ಕೃಷಿ ನಿರ್ದೇಶಕರಾದ ನಟರಾಜ ಟಿ.ಹೆಚ್‌., ಸಂದೀಪ ಜಿ. ಆರ್‌. ಮತ್ತು ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ವಿವಿಧ ಕೃಷಿಯೇತರ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.