ರಾಮದುರ್ಗ 11: ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್ದಿಂದ ಅಧಿಕ ಸಂಖ್ಯೆಯ ಅಭ್ಯಥರ್ಿಗಳು ಆಯ್ಕೆಯಾಗಿ ದೊಡ್ಡಪಕ್ಷವಾಗಿ ಹೊರಹೊಮ್ಮಿದ ಬೆನ್ನಲ್ಲೆ ಪಟ್ಟಣದಲ್ಲಿ ಮಾಜಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಹುತಾತ್ಮ ಚೌಕ, ಜುನಿಪೇಠೆ ಮುಖ್ಯ ರಸ್ತೆಗಳಲ್ಲಿ ಜಮಾಯಿಸಿದ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ ಪಟ್ಟಣ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಅರಿತು. ಬಿಜೆಪಿ ದುರಾಡಳಿತದಿಂದ ಬೇಸತ್ತ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಜಹೂರ ಹಾಜಿ, ಕೃಷ್ಣಾ ಲಮಾಣಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರಮೇಶ ಬಂಡಿವಡ್ಡರ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸೋಮಶೇಖರ ಸಿದ್ದಲಿಂಗಪ್ಪನವರ, ಎಪಿಎಂಸಿ ಅಧ್ಯಕ್ಷ ಫಕೀರಪ್ಪ ಕೊಂಗವಾಡ, ಮುಖಂಡರಾದ ಜಯಪ್ರಕಾಶ ಶಿಂಧೆ, ಎಸ್. ಎಂ. ಪಾಟೀಲ, ನವೀನ ಗದಗ, ಶಿವನಗೌಡ ಪಾಟೀಲ ಸೇರಿದಂತೆ ಇತರರಿದ್ದರು.