ಚಳುವಳಿಗಾರರ ಮೇಲೆ ಮಾಡಿರುವ ಲಾಠಿ ಚಾರ್ಚ ಖಂಡಿಸಿ : ಪ್ರತಿಭಟನೆ
ಅಥಣಿ 12: ಕೂಡಲಸಂಗಮ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾಜದ ಮೀಸಲಾತಿ ಚಳುವಳಿಗಾರರ ಮೇಲೆ ಲಿಂಗಾಯತ ವಿರೋಧಿ ಕಾಂಗ್ರೆಸ್ ಸರಕಾರ ಪೊಲೀಸರ ಮೂಲಕ ಮಾರಣಾಂತಿಕ ಹಲ್ಲೆ, ಲಾಠಿ ಚಾರ್ಚ ಮಾಡಿರುವ ಘಟನೆಯನ್ನು ಖಂಡಿಸಿ ಅಥಣಿ ತಾಲೂಕಾ ಪಂಚಮಸಾಲಿ ಸಮಾಜ ಬಾಂಧವರು ಶವಯೋಗಿ ವೃತ್ತದಲ್ಲಿ ನಾನವ ಸರಪಳಿ ಮಾಡಿ ಒಂದು ಘಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು.
ಕೂಡಲಸಂಗಮದ ಪಂಚಮಸಾಲಿ ಮಹಾಪೀಠದ ಪ್ರಥಮ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕೊಡಬೇಕು ಎಂದು ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ದುರುದ್ದೇಶದಿಂದ ಲಾಠಿಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಇದರಿಂದ ಸಾವಿರಾರು ಪಂಚಮಸಾಲಿ ಹೋರಾಟಗಾರರಿಗೆ ಗಂಭೀರ ಗಾಯಗಳಾಗಿವೆ ಅಷ್ಟೇ ಅಲ್ಲ ನೂರುಕ್ಕೂ ಹೆಚ್ಚು ಹೋರಾಟಗಾರರ ಸ್ಥಿತಿ ಚಿಂತಾ ಜನಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೋರಾಗಾರರು ಆರೋಪಿಸಿದರು.
ಅಂದು 12 ನೇ ಶತಮಾನದಲ್ಲಿ ಮಂತ್ರಿ ಕೊಂಡಿಮಂಚಣ್ಣ ಲಿಂಗಾಯತರ ಮೇಲೆ ಹತ್ಯೆ ಮಾಡಿಸಿದ್ದರು ಅದೇ ರೀತಿಯಾಗಿ ಇಂದು 21ನೇ ಶತಮಾನದಲ್ಲಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಕ್ಷಾಂತರ ಪಂಚಮಸಾಲಿಗಳ ಮೇಲೆ ಗುಂಡಾಗಿರಿ ಹಾಗೂ ಲಾಟಿಚಾರ್ಜ್ ಮಾಡಿಸಿ ಸಮಾಜ ಬಂಧುಗಳ ರಕ್ತ ಹರಿಸಿದ್ದಾರೆ ಎಂದ ಅವರು ಲಿಂಗಾಯತರ ಹೋರಾಟ ಹತ್ತಿಕ್ಕುವ ಹುನ್ನಾರದ ರೂವಾರಿ ಸಿ.ಎಂ. ಸಿದ್ದರಾಮಯ್ಯನವರೇ ಆಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಪಂಚಮಸಾಲಿಗಳು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ವಕೀಲರ ಮೇಲೆ ಹಾಗೂ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಸರ್ಕಾರದ ಧೋರಣೆಯನ್ನು ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದ ಅವರು ಸ್ವತಃ ಲಾಟಿ ಹಿಡಿದುಕೊಂಡು ಸ್ವ ಹಿತಾಸಕ್ತಿ ತೋರಿ ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಆರಿ್ಹತೇಂದ್ರ ರವರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಗೂಂಡಾವರ್ತನೆ ಸರಕಾರ ಮತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಅನರ್ಹರು. ಈ ಇಬ್ಬರನ್ನು ಕೂಡಲೇ ವಜಾಗೊಳಿಸಬೇಕೆಂದು ಇಡೀ ಸಮಾಜದ ಪರವಾಗಿ ರಾಜ್ಯಪಾಲರನ್ನು ಆಗ್ರಹಿಸಿದರು ಮತ್ತು ಕೂಡಲೇ ಮುಖ್ಯಮಂತ್ರಿಗಳು ಸಮಾಜ ಬಾಂಧವರು ಹಾಗೂ ಜಗದ್ಗುರುಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಕುತಂತ್ರ ರಾಜಕಾರಣಕ್ಕೆ ಕಡಿವಾಣ ಹಾಕಬೇಕು, ಅಲ್ಲದೆ ಪಂಚಮಸಾಲಿಗಳ ಹಾಗೂ ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಮಾಡಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಧರೆಪ್ಪ ಠಕ್ಕಣ್ಣವರ, ತಾಲೂಕಾ ಅಧ್ಯಕ್ಷ ಅವಿನಾಶ ನಾಯಿಕ, ಸಮಾಜದ ನ್ಯಾಯವಾದಿಗಳಾದ ಬಿ.ಬಿ.ಬಿಸಗುಪ್ಪಿ, ಬಿ.ಬಿ.ಹೊನಗೌಡರ, ಧುರೀಣರಾದ ಬಿ.ಆರ್.ಗಂಗಪ್ಪನವರ, ರವಿ.ಪೂಜಾರಿ, ಉಮೇಶರಾವ ಬಂಟೋಡಕರ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಸ್.ಎಸ್.ಪಾಟೀಲ, ಡಿ.ಬಿ.ಠಕ್ಕಣ್ಣವರ, ಪುರಸಭಾ ಸದಸ್ಯರಾದ ರಾಜಶೇಖರ ಗುಡೋಡಗಿ, ಪ್ರಮೋದ ಬಿಳ್ಳೂರ, ಧುರೀಣರಾದ ಡಾ.ಪ್ರಕಾಶ ಕುಮಠಳ್ಳಿ, ಸಂತೋಷ ಕಕಮರಿ, ಗೀರೀಶ ಬುಟಾಳಿ, ಅಶೋಕ ಯಲ್ಲಡಗಿ, ರವಿ ಬಡಕಂಬಿ, ಅಣ್ಣಪ್ಪಾ ಹಳ್ಳೂರ, ರಾಮಣ್ಣಾ ಧರೀಗೌಡ, ಮುರುಘೇಶ ಕುಮಠಳ್ಳಿ, ನಾನಾಸಾಹೇಬ ಅವತಾಡೆ, ಡಿ.ಸಿ.ನಾಯಿಕ, ಮಲ್ಲಿಕಾರ್ಜುನ ಅಂದಾನಿ, ಶಿವರುದ್ರ ಘೂಳಪ್ಪನವರ, ವಿಜಯ ನೇಮಗೌಡ, ಅಪ್ಪಾಸಾಬ ಅಲಿಬಾದಿ, ಶಿವಾನಂದ ಸಿಂದೂರ, ಸಿದ್ದು ಪಾಟೀಲ, ಪ್ರಭಾಕರ ಚವ್ಹಾಣ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ, ಗಿರಿಮಲ್ಲಪ್ಲ ಉಪ್ಪಾರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಕೈಗೊಂಡಿದ್ದರು.