ಏಕಾಗ್ರತೆಯ ಅಧ್ಯಯನಕ್ಕೆ ಅವಧಾನವೇ ಪ್ರಧಾನ: ಡಾ. ವೀಣಾ ಬಿರಾದಾರ
ಧಾರವಾಡ 17: ಏಕಾಗ್ರತೆಯ ಅಧ್ಯಯನಕ್ಕೆ ಅವಧಾನವೇ ಪ್ರಧಾನ. ಅಧ್ಯಯನಶೀಲರಾದಾಗ ಅಸಭ್ಯವಿಚಾರಗಳು, ನಕಾರಾತ್ಮಕ ಭಾವನೆಗಳು ಮನಸ್ಸಿನಲ್ಲಿ ಪ್ರವೇಶವಾಗದಂತೆ ಜಾಗೃತಿ ವಹಿಸಬೇಕು ಎಂದು ಧಾರವಾಡ ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಹೆಬಸೂರಿನ ಸೆಕೆಂಡರಿ ಸ್ಕೂಲನಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ?’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಅಧ್ಯಯನ ನಿರತರಾದಾಗ ವಿನಾಕಾರಣ ಹಾಳು ಹರಟೆ ಸಲ್ಲದು. ಅದು ನಿಮ್ಮ ಮನಸ್ಸಿನ ಶಕ್ತಿ ಕುಗ್ಗಿಸುತ್ತದೆ. ಸಾಮೂಹಿಕ ಅಧ್ಯಯನ, ಚರ್ಚೆ, ಪುನರಾವರ್ತನೆ, ವಿಚಾರ ವಿನಿಮಯದ ಮೂಲಕ ವಿಷಯ ಗ್ರಹಿಕೆ ಮಾಡಿಕೊಳ್ಳಬೇಕು. ಓದಿದ ವಿಷಯವನ್ನು ಸಾರಾಂಶ ರೂಪದಲ್ಲಿ ಬರೆಯಬೇಕು. ಪುನಃ ಪುನಃ ಪ್ರತಿದಿನ ಓದುವ, ಬರೆಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಪರೀಕ್ಷೆ ಬಗ್ಗೆ ವಿನಾಕಾರಣ ಭಯಪಡಬಾರದು. ಭಯದಿಂದ ಏಕಾಗ್ರತೆ ಹೊಂದಲು ಅಸಾಧ್ಯ ಎಂದರು.
ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಕ.ವಿ.ವ. ಸಂಘದ ಶಿಕ್ಷಣ ಮಂಟಪವು ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೆಬಸೂರ ವಿದ್ಯಾ ಪ್ರಸಾರ ಸಮಿತಿ ಕಾರ್ಯಾಧ್ಯಕ್ಷ ಎಸ್. ಎಸ್. ಬಣವಿ ಮಾತನಾಡಿ, ಇದೊಂದು ಗ್ರಾಮೀಣ ಮಕ್ಕಳಿಗೆ ವಿನೂತನ ಕಾರ್ಯಕ್ರಮ. ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿ ಶಾಲೆಗೆ, ಪಾಲಕರಿಗೆ, ಗುರುಗಳಿಗೆ, ಕೀರ್ತಿ ತರಬೇಕೆಂದು ಹೇಳಿ ಶುಭ ಕೋರಿದರು.
ವಿದ್ಯಾ ಪ್ರಸಾರ ಸಮಿತಿ ಅಧ್ಯಕ್ಷ ಆರ್. ಎಚ್. ಮಾಡಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಏಕಾಗ್ರತೆಗೆ ಸಂಬಂಧಿಸಿದಂತೆ ಸಂದೇಹದ ಬಗ್ಗೆ ಪ್ರಶ್ನೆ ಕೇಳಿ ಪರಿಹಾರ ಪಡೆದರು.
ಪ್ರಭು ಶಿವಪೂರ ಸ್ವಾಗತಿಸಿದರು. ಎಂ.ಎಂ. ಹೊಸಭಾವಿ ನಿರೂಪಿಸಿದರು. ಆರ್.ಬಿ. ಕೊಣ್ಣೂರ ವಂದಿಸಿದರು. ಬಿ.ಎಸ್. ಕೊಣ್ಣೂರ, ಸಿ.ಬಿ. ಗೌಡರ, ಎಸ್.ಎ. ನದಾಫ್, ಆರ್.ಜಿ. ಮರಚರಡ್ಡಿ, ಎ.ಎಚ್. ಪಾಟೀಲ, ಎಸ್.ಎಸ್. ನರಳೇಕರ, ಕವಿತಾ ಹೆಬ್ಬಾಳ, ವತ್ಸಲಾ ನೀರಲಗಿ, ಅಂಕಿತಾ ಭದ್ರಾಪೂರ, ಅಂಕಿತಾ ಮಳಲಿ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.