ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ವಿಮಾ ಮೊತ್ತದ ಪರಿಹಾರ
ಬೆಳಗಾವಿ 18 : ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ 8.37 ಲಕ್ಷ ಜನರು ನೊಂದಣಿಯಾಗಿದ್ದು, ಅದರಲ್ಲಿ 3884 ಫಲಾನುಭವಿಗಳಿಗೆ 77.68 ಕೋಟಿ ರೂ.ಗಳ ವಿಮಾ ಮೊತ್ತದ ಪರಿಹಾರ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ ಚೌಧಿರಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಕರ್ನಾಟಕ ರಾಜ್ಯ ಹಾಗೂ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಯೋಜನ ಪಡೆದ ಫಲಾನುಭವಿಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 16.23 ಲಕ್ಷ ಜನರು ನೊಂದಣಿಯಾಗಿದ್ದು, ಅದರಲ್ಲಿ 500 ಫಲಾನುಭವಿಗಳಿಗೆ 10 ಕೋಟಿ ರೂ.ಗಳ ವಿಮಾ ಮೊತ್ತದ ಪರಿಹಾರ ನೀಡಲಾಗಿದೆ ಹಾಗೂ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಜಿಲ್ಲೆಯಲ್ಲಿ 21.17 ಲಕ್ಷ ಜನರು ನೊಂದಣಿಯಾಗಿದ್ದಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 1 ಕೋಟಿ 39 ಲಕ್ಷ ಜನರು ನೊಂದಣಿಯಾಗಿದ್ದು, ಅದರಲ್ಲಿ 57116 ಫಲಾನುಭವಿಗಳಿಗೆ 1142.32 ಕೋಟಿ ರೂ.ಗಳ ವಿಮಾ ಮೊತ್ತದ ಪರಿಹಾರ ನೀಡಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 2 ಕೋಟಿ 15 ಲಕ್ಷ ಜನರು ನೊಂದಣಿಯಾಗಿದ್ದು, ಅದರಲ್ಲಿ 5767 ಫಲಾನುಭವಿಗಳಿಗೆ 115.34 ಕೋಟಿ ರೂ.ಗಳ ವಿಮಾ ಮೊತ್ತದ ಪರಿಹಾರ ನೀಡಲಾಗಿದೆ ಹಾಗೂ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ 1 ಕೋಟಿ 98 ಲಕ್ಷ ಜನರು ನೊಂದಣಿಯಾಗಿದ್ದಾರೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.