ಇಂಥ ಗಂಗಾಮತಸ್ಥರಿಗೆ ರಾಜಕೀಯ ಪ್ರಾತಿನಿಧ್ಯ, ಸ್ಥಾನಮಾನ ಕಲ್ಪಿಸಲು ಬದ್ಧ: ಶ್ರೀನಿವಾಸ ಮಾನೆ
ಹಾನಗಲ್ 04: ಅಂಬಿಗರು ನಂಬಿಗಸ್ಥರು. ದೋಣಿ ಮುನ್ನಡೆಸಿ ದಡ ಮುಟ್ಟಿಸುವಲ್ಲಿ ಸಮರ್ಥರು. ಇಂಥ ಗಂಗಾಮತಸ್ಥರಿಗೆ ರಾಜಕೀಯ ಪ್ರಾತಿನಿಧ್ಯ, ಸ್ಥಾನಮಾನ ಕಲ್ಪಿಸಲು ಬದ್ಧ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿ ಸೋಮವಾರ ಗಂಗಾಮತಸ್ಥರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯ ನೇರ, ನಿಷ್ಠುರವಾದಿಯಾಗಿದ್ದರು. ನಿರ್ಭೀಡೆಯಿಂದ ವಚನಗಳ ಮೂಲಕ ಸಮಾಜ ಎಚ್ಚರಿಸಿದರು. ನಾನೂ ಕೂಡ ಅನೇಕ ಸಂದರ್ಭದಲ್ಲಿ ನೇರ ಮತ್ತು ನಿಷ್ಠುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಶರಣರ ಸಂದೇಶಗಳನ್ನು ಅಳವಡಿಸಿಕೊಳ್ಳದಿದ್ದರೆ ಜಯಂತಿ ಆಚರಣೆಗಳಿಗೂ ಅರ್ಥ ಬರುವುದಿಲ್ಲ. ಈ ವಿಚಾರದಲ್ಲಿ ಸಮಾಜ ಹಿಂದೆ ಬಿದ್ದಿದೆ. ಬಸವಣ್ಣನ ಅನುಭವ ಮಂಟಪದಲ್ಲಿ ಮುಂಚೂಣಿಯಲ್ಲಿದ್ದು, ಸಮ ಸಮಾಜದ ಪರಿಕಲ್ಪನೆಗೆ ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಆಶಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದ ಅವರು ಸಮಾಜದಿಂದ ಹಾನಗಲ್ ನಗರದಲ್ಲಿ ನಿರ್ಮಿಸುತ್ತಿರುವ ಗಂಗಾಪರಮೇಶ್ವರಿ ಕಲ್ಯಾಣ ಮಂಟಪ ಕಾಮಗಾರಿ ಪೂರ್ಣಗೊಳಿಸಲು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಪ್ರಮೋದ ಮಧ್ವರಾಜ ಮಾತನಾಡಿ, ಪ್ರತಿಯೊಬ್ಬರೂ ಕೂಡ ಸಮಾಜದ ಬಗ್ಗೆ ಪ್ರೀತಿ, ಅಭಿಮಾನ ಇಟ್ಟುಕೊಳ್ಳಬೇಕಿದೆ. ನಿಜಶರಣ ಅಂಬಿಗರ ಚೌಡಯ್ಯ ಅವರು ಬಹಳ ಕಠೋರವಾಗಿ ಸಮಾಜದ ಶೋಷಣೆಯನ್ನು ವಿರೋಧಿಸಿದ್ದರು. ಇನ್ನೊಬ್ಬರಿಗೆ ಶಕ್ತಿ ತುಂಬುವ ಕೆಲಸ ನಾವೆಲ್ಲ ಮಾಡಬೇಕಿದೆ. ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ನಡೆಯಬೇಕಿದೆ ಎಂದು ಹೇಳಿದ ಅವರು ಸಮಾಜದ ಜನಸಂಖ್ಯೆ ಹೆಚ್ಚಿದೆ. ಆದರೆ ಸಂಘಟನೆ ಚುರುಕುಗೊಳ್ಳಬೇಕಿದೆ. ಪ್ರತಿ ಗ್ರಾಮಗಳಲ್ಲಿಯೂ ಸಹ ಯುವ ಮತ್ತು ಮಹಿಳಾ ಸಂಘಗಳ ರಚನೆಯ ಮೂಲಕ ಸಂಘಟನೆ ಮಾಡಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಸ್ವಾಮೀಜಿ ಮಾತನಾಡಿ, ಅಂಬಿಗರ ಚೌಡಯ್ಯ ಅವರದ್ದು ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ. ಮುಚ್ಚುಮರೆ ಇಲ್ಲದೇ ಬಿಚ್ಚು ಮನಸ್ಸಿನಿಂದ ಕಂಡಿದ್ದನ್ನು ಕಂಡಂತೆ ಹೇಳುವ ಕೆಚ್ಚೆದೆ ಅವರಲ್ಲಿತ್ತು. ಶಿವಯೋಗ ಸಾಧನೆ ಮಾಡುತ್ತಾ ಸಾವಿರಾರು ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಸಮಾಜದ ತಾಲೂಕಾಧ್ಯಕ್ಷ ಪ್ರದೀಪ ಶೇಷಗಿರಿ, ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಕೆಎಂಎಫ್ ನಿರ್ದೇಶಕ ಚಂದ್ರ್ಪ ಜಾಲಗಾರ, ಎಸ್.ಆನಂದ, ರಾಜೇಂದ್ರ ಬಾರ್ಕಿ, ನಾಗೇಂದ್ರ್ಪ ತುಮರಿಕೊಪ್ಪ, ಅನಂತವಿಕಾಸ ನಿಂಗೋಜಿ, ಎಸ್.ಎಫ್.ಕಠಾರಿ, ಸಿದ್ದಲಿಂಗಪ್ಪ ಕಮಡೊಳ್ಳಿ, ಸತೀಶ ಕೂಸನೂರ, ರವಿ ಹನುಮನಕೊಪ್ಪ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಫೋಟೊ:
* ಹಾನಗಲ್‌ನಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು.
* ಹಾನಗಲ್‌ನಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು.