ಮೌಲ್ಯಾಧಾರಿತ ಶಿಕ್ಷಣದಿಂದ ಸಮಾಜದಲ್ಲಿ ಸಹಬಾಳ್ವೆ ಸಾಧ್ಯ: ನ್ಯಾ. ಸಿ.ಚಂದ್ರಶೇಖರ
ಕೊಪ್ಪಳ 27: ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಸಹಬಾಳ್ವೆಯಿಂದ ಬಾಳಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸಿ.ಚಂದ್ರಶೇಖರ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸ್ನಾತಕೋತ್ತರ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಲಬುರ್ಗಾ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ಯಲಬುರ್ಗಾ ಸ್ನಾತಕೋತ್ತರ ಕೇಂದ್ರ, ಕೊಪ್ಪಳ ವಿಶ್ವ ವಿದ್ಯಾಲಯದ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸಂವಿಧಾನದಲ್ಲಿರುವ ಕಾನೂನುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಪಾಲಿಸಬೇಕು. ಕಾನೂನಿನ ನೆರವು ಮತ್ತು ಅರಿವು ಮೂಡಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶ ವಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಮಹಿಳೆ, ಮಗು ಹಾಗೂ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇದ್ದರೇ ಯಾವ ಜಾತಿಯಾದರೂ ಕೂಡ ಕಾನೂನು ಸೇವೆಗಳ ಪ್ರಾಧಿಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.
ದೇಶದಲ್ಲಿ ಸಂವಿಧಾನ ಎಲ್ಲರಿಗೂ ಒಂದೇ ಆಗಿದ್ದು, ಪ್ರತಿಯೊಬ್ಬರೂ ಸಂವಿಧಾನ ಅಡಿಯಲ್ಲಿ ಸಮಾನತೆ, ಸಹಬಾಳ್ವೆದಿಂದ ಬದುಕಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲೆಯ ಪ್ರತಿ ತಾಲ್ಲೂಕಿನ ಒಂದೊಂದು ಗ್ರಾಮವನ್ನು ದತ್ತು ಪಡೆಯುವ ಮೂಲಕ ಜನರ ಏಳಿಗೆಗಾಗಿ ಕಾರ್ಯಕ್ರಮ ಆಯೋಜಿಸುವುದಲ್ಲದೇ ವಿವಿಧ ಇಲಾಖೆಗಳ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಸೇತುವೆಯಾಗಿ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಮಾಜದಲ್ಲಿ ಸೂಜಿಯಂತೆ ಸಂಬಂಧವನ್ನು ಜೋಡಣೆಯನ್ನು ಮಾಡಲಾಗುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕ ಬಸವರಾಜ ಇಳಿಗನೂರ ಮಾತನಾಡಿ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ರಾಷ್ಟ್ರಕ್ಕೆ ಸಂವಿಧಾನ ಅರೆ್ಣಗೊಂಡಿರುತ್ತದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನ-ಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಕೆ.ವಿ.ಪ್ರಸಾದ್ ಮಾತನಾಡಿ, ಸಂವಿಧಾನದ ಮೂಲಕ ಲಭಿಸಿರುವ ಪ್ರಜಾಪ್ರಭುತ್ವ ವ್ಯಕ್ತಿ, ಪಕ್ಷ, ಧರ್ಮ, ಜಾತಿ ಎಲ್ಲವನ್ನೂ ಮೀರಿದ ಮೌಲ್ಯವಾಗಿದೆ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆಯಾಗಿದೆ ಎಂದರು.
ಯಲಬುರ್ಗಾದ ವಕೀಲರ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಸ್.ಬೇಲೇರಿ ಮಾತನಾಡಿದರು. ಕೊಪ್ಪಳ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಕೆ.ವಿ.ಪ್ರಸಾದ್ ಅವರು ಸಂವಿಧಾನದ ಪೀಠಿಕೆ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಾಹಾಂತೇಶ ಎಸ್ ದರಗದ, ಸ್ನಾತ್ತಕೋತ್ತರ ಕೇಂದ್ರದ ನಿರ್ದೇಶಕ ಡಾ.ಚಲವಾದಿ ಚನ್ನಬಸಪ್ಪ, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಅಪರ ಸರ್ಕಾರಿ ವಕೀಲರಾದ ಮಲ್ಲನಗೌಡ ಪಾಟೀಲ, ವಕೀಲರ ಸಂಘದ ಕಾರ್ಯದರ್ಶಿ ಈರಣ್ಣ ಕೋಳೂರು, ಸಹಾಯಕ ಪ್ರಾಧ್ಯಾಪಕರಾದ ಡಾ.ಅಶ್ವಿನ್ ಕುಮಾರ್, ಡಾ.ಸಾದುಸೂರ್ಯಕಾಂತ, ಡಾ.ಸರಸ್ವತಿ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು, ವಕೀಲರು, ವಿದ್ಯಾರ್ಥಿಗಳು ಇದ್ದರು.
ಉಪನ್ಯಾಸಕ ಡಾ.ನಾಗಪ್ಪ ಹೂವಿನಭಾವಿ ನಿರೂಪಿಸಿದರು. ವಿದ್ಯಾರ್ಥಿನಿ ಸುವರ್ಣಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ.ಸಾಧು ಸೂರ್ಯಕಾಂತ ಸ್ವಾಗತಿಸಿದರು. ಡಾ.ಸರಸ್ವತಿ ವಂದಿಸಿದರು.