ಸಡಗರದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಲೋಕದರ್ಶನ ವರದಿ

ಮುದ್ದೇಬಿಹಾಳ 21:ನಿಜಶರಣ ಅಂಬಿಗರ ಚೌಡಯ್ಯನವರಂತಹ ನೇರ ನಿಷ್ಠೂರ ನಡವಳಿಕೆಯ ಶರಣರನ್ನು ಆಯಾ ಸಮಾಜಗಳಿಗೆ ಸೀಮಿತಗೊಳಿಸುತ್ತಿರುವುದು ಶರಣರಿಗೇ ಅವಮಾನ ಮಾಡಿದಂತೆ. ಇದನ್ನ ತಪ್ಪಿಸಲು ಆಧುನಿಕ ವ್ಯವಸ್ಥೆಯಲ್ಲಿ ಸಿಕ್ಕಿ ನರಳುತ್ತಿರುವುದು ಯುವಜನತೆ ಎಲ್ಲ ಶರಣರ ವಚನಗಳಲ್ಲಿನ ಮೌಲ್ಯಯುತ ಸಂದೇಶಗಳನ್ನು ತಿಳಿದುಕೊಳ್ಳಲು ಯುವಜನತೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಹೇಳಿದ್ದಾರೆ.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶರಣರನ್ನು ಆಯಾ ಸಮಾಜದವರು ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಶರಣರ ವಚನಗಳ ಮೌಲ್ಯ ಸೀಮಿತವಾಗತೊಡಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಯುವಜನತೆ ಎಲ್ಲ ಶರಣರನ್ನು ಪಾಲಿಸಬೇಕು. ಅವರೆಲ್ಲರ ವಚನಗಳ ಸಾರ ಅರಿತುಕೊಂಡು ನಡೆದು ಹೊಸ ಸಮಾಜ ಕಟ್ಟಲು ಮುಂದಾಗಬೇಕು ಎಂದರು.

ಸಾನಿಧ್ಯ ವಹಿಸಿದ್ದ ತಂಗಡಗಿ ಹಡಪದ ಅಪ್ಪಣ್ಣ ಸಂಸ್ಥಾನಮಠದ ಅನ್ನದಾನಭಾರತಿ ಶ್ರೀಗಳು ಆಶಿರ್ವಚನ ನೀಡಿದರು. ತಾಳಿಕೊಟೆ ತಾಲೂಕು ಬಳಗಾನೂರ ಕ್ರಾಸ್ನ ಕುವೆಂಪು ವಿದ್ಯಾಸಂಸ್ಥೆಯ ಅಧ್ಯಕ್ಷ ಬಸವರಾಜ ನಾಯ್ಕೋಡಿ ಅವರು ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ.ಚಲವಾದಿ ಅವರು ಚೌಡಯ್ಯನವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಭಾರ ತಹಸೀಲ್ದಾರ್ ನಿಂಗಪ್ಪ ಬಿರಾದಾರ, ನಿಜಶರಣ ಅಂಬಿಗರ ಚೌಡಯ್ಯ ಹಿತರಕ್ಷಣಾ ಸಂಘದ ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಚಂದ್ರಶೇಖರ ಅಂಬಿಗೇರ, ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಸ್.ಬಿ.ಬಂಗಾರಿ ಮತ್ತಿತರರು ವೇದಿಕೆಯಲ್ಲಿದ್ದರು.

ಡಾ.ಎಸ್.ಸಿ.ಚೌಧರಿ ಸ್ವಾಗತಿಸಿದರು. ಟಿ.ಡಿ.ಲಮಾಣಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ತಂಗಡಗಿ ರಸ್ತೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ತಹಸೀಲ್ದಾರ್, ಅಂಬಿಗರ ಸಮಾಜದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.