ಬಿಣಗಾ ಗ್ರಾಸಿಂ ಕಾರ್ಖಾನೆಯಲ್ಲಿ ಕ್ಲೋರಿನ್ ಸೋರಿಕೆ : 14 ಕಾರ್ಮಿಕರು ಅಸ್ವಸ್ಥ
ಕಾರವಾರ 11: ಕಾರವಾರ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಿಣಗಾ ಗ್ರಾಮದಲ್ಲಿರುವ ಆದಿತ್ಯ ಬಿರ್ಲಾ ಕಂಪನಿಗೆ ಸೇರಿದ ಗ್ರಾಸಿಂ ಇಂಡಸ್ಟ್ರಿ ಘಟಕದಲ್ಲಿ ಕ್ಲೋರಿನ್ ಸೋರಿಕೆಯಾಗಿ ಹದಿನಾಲ್ಕು ಜನ ಕಾರ್ಮಿಕರು ಅಸ್ವಸ್ಥ ಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಅಸ್ವಸ್ಥಗೊಂಡ ಕಾರ್ಮಿಕರನ್ನು ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ ವೇಳೆಗೆ ಎಲ್ಲರೂ ಪ್ರಾಣ ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಕ್ಲೋರಿನ್ ಸೋರಿಕೆ ಸಾರ್ವಜನಿಕರಲ್ಲಿ ಭೀತಿ ತಂದಿದೆ. ಈಚೆಗೆ ಕ್ಲೋರಿನ್ ಸೋರಿಕೆ ಯಿಂದ ಬೈತಖೋಲ್ ದ ಒಬ್ಬ ಯುವಕ ಕಳೆದ ನವ್ಹೆಂಬರ್ ತಿಂಗಳಲ್ಲಿ ಮೃತಪಟ್ಟದ್ದು , ಆ ನಂತರ ಕಾರ್ಖಾನೆ ಆಡಳಿತ ಎಚ್ಚೆತ್ತು ಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ .ಆದರೆ ಗ್ರಾಸಿಂ ಈ ದುರ್ಘಟನೆ ಬಗ್ಗೆ ಅಂತರಿಕ ತನಿಖೆಗೆ ಆದೇಶಿಸುವ ಲಕ್ಷಣಗಳು ಕಂಡು ಬಂದಿವೆ.ಸ್ಥಳಕ್ಕೆ ಪೊಲೀಸರು, ಆಗ್ನಿಶಾಮಕದಳ ಆಗಮಿಸಿದೆ.
ಹಠಾತ್ ಪ್ರತಿಭಟನೆ : ಕಾರ್ಖಾನೆ ಇರುವ ಗ್ರಾಮಬಿಣಗಾದ ಸ್ಥಳೀಯರು ನಗರಸಭೆಯ ಮಾಜಿ ಸದಸ್ಯ ರಾಜಾ ಗೌಡ, ಹಾಲಿ ಸದಸ್ಯ ಪಿ.ಪಿ.ನಾಯ್ಕ, ರುಕ್ಮಿಣಿ ಗೌಡ,ಶ್ವೇತಾ ನಾಯ್ಕ ನೇತೃತ್ವದಲ್ಲಿ ಗ್ರಾಸಿಂ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು .ಕಾರ್ಖಾನೆ ಗ್ರಾಮಸ್ಥರ ಸಭೆ ಕರೆದಿಲ್ಲ. ಇಂದು ಘಟನೆ ನಡೆದು ಎರಡು ತಾಸು ವಿಷಯ ಮುಚ್ಚಿಟ್ಟದ್ದೇಕೆ ಎಂದು ಪ್ರಶ್ನಿಸಿದರು.
ಎಚ್ಚರಿಕೆ ಸೈರನ್ ಕೂಗಿಲ್ಲ. ದೊಡ್ಡ ಪ್ರಮಾಣದ ಅನಾಹುತ ಆದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು. ಅಂಬುಲೆನ್ಸ ಹೋದ ನಂತರ ಸಾರ್ವಜನಿಕರು ಭಯಭೀತರಾಗಿ , ವಿಷಯವನ್ನು ಕಾರವಾರ ದಿಂದ ತಿಳಿಯುವಂತಾಗಿದೆ. ಈ ಬಗ್ಗೆ ಕಾರ್ಮಿಕ ಅಧಿಕಾರಿ, ಪರಿಸರ ಅಧಿಕಾರಿ , ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬೇಕೆಂದು ಅಗ್ರಹಿಸಿದರು.