ಮಕ್ಕಳೆಂದರೆ ಹೇಳಿದಂತೆ ಕುಣಿಯುವ ಗೊಂಬೆಗಳಲ್ಲ: ಗುರುರಾಜ ಲೂತಿ
ಬೀಳಗಿ 13: ಮಕ್ಕಳೆಂದರೆ ಹೇಳಿದಂತೆ ಕುಣಿಯುವ ಗೊಂಬೆಗಳಲ್ಲ, ಬದಲಾಗಿ ಭವಿಷ್ಯತ್ತಿನ ಭಾರತದ ನಿರ್ಮಾತೃಗಳು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳದೇ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಮಹಾನ ವ್ಯಕ್ತಿಗಳಾಗಲು ಸಾಧ್ಯವೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು.
ತಾಲೂಕಿನ ಬೂದಿಹಾಳ ಎಸ್. ಎ ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯ ಶಾಲೆಗಳ ಮಕ್ಕಳಿಗಾಗಿ ಹಮ್ಮಿಕೊಂಡ ಮಕ್ಕಳ ಗ್ರಾಮಸಭೆಯಲ್ಲಿ ನಮ್ಮ ಮಕ್ಕಳು ನಮ್ಮೆಲ್ಲರ ಆಸ್ತಿ ಎಂಬ ವಿಷಯದ ಕುರಿತು ಮಾತನಾಡಿದರು.
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು, ಮಹಿಳಾ ಸಬಲೀಕರಣಕ್ಕಾಗಿ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ನಿಷೇಧ ಕಾಯ್ದೆ, ಬೇಟಿಬಚಾವೋ ಬೇಟಿ ಪಡಾವೋ, ಮಕ್ಕಳ ಸಹಾಯವಾಣಿ, ಬಾಲಕಾರ್ಮಿಕ ಪದ್ಧತಿ ನಿಷೇದ ಇಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು ಅವುಗಳ ಸಮರ್ಕ ಅನುಷ್ಠಾನಕ್ಕಾಗಿ ಎಲ್ಲರೂ ಸಹಕರಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢ ಶಾಲಾ ವಿದ್ಯಾರ್ಥಿನಿ ವೇದಾ ಅಂಗಡಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟು ದೇಶದ ಸತ್ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಶ್ಲಾಘನಿಯವೆಂದರು.
ರೀಚ್ ಸಂಸ್ಥೆಯ ಸುಧಾ ಚಿಮ್ಮನಕಟಿಯವರು ಬಾಲ್ಯವಿವಾಹ ನಿಷೇಧದ ಕುರಿತು ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ಆರ್. ನದಾಫ್ ಪ್ರಾಸ್ಥಾವಿಕ ಮಾತುಗಳನ್ನಾಡಿ ನಂತರ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಚಿದಾನಂದ ಬೂದಿಹಾಳ್, ಶ್ರೀಶೈಲಗೌಡ ಗಂಗಲ್, ಪ್ರವೀಣ್ ಅಡಗಿಮನಿ, ನಾಗಪ್ಪ ಸನ್ನೆಲ್ಲಿ, ಕಾಶವ್ವ ಪೂಜಾರಿ, ಇಂದ್ರವ್ವ ಹಾದಿಮನಿ, ರೇಣುಕಾ ಸನ್ನೆಲ್ಲಿ, ಅರ್ಚನಾ ಮೇಡಮ್, ಕೆ. ಎಲ್. ಮಾದರ,ಹಾಗೂ ಶಾಲಾ ಶಿಕ್ಷಕರು ಇತರರಿದ್ದರು. ಕರಿಸಿದ್ಧೇಶ್ವರ್ ಶಾಲಾ ಮಕ್ಕಳು ನಾಡಗೀತೆ ಹಾಡಿದರು. ಬಾಲ್ಯವಿವಾಹ ನಿಷೇಧದ ಪ್ರತಿಜ್ಞೆ ಮಾಡಲಾಯಿತು.