ರಾಜ್ ಕೋಟ್, ಜ 11: ಚೇತೇಶ್ವರ ಪೂಜಾರ (ಔಟಾಗದೆ 162 ರನ್) ಹಾಗೂ ಶೆಲ್ಡನ್ ಜಾಕ್ಸನ್(ಔಟಾಗದೆ 99 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸೌರಾಷ್ಟ್ರ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಕರ್ನಾಟಕ ವಿರುದ್ಧ ಮೊದಲನೇ ದಿನದ ಮುಕ್ತಾಯಕ್ಕೆ ಉತ್ತಮ ರನ್ ದಾಖಲಿಸಿದೆ.
ಇಲ್ಲಿನ, ಮಾಧವ್ ರಾವ್ ಕ್ರಿಕೆಟ್ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡ ಮೊದಲ ದಿನದ ಮುಕ್ತಾಯಕ್ಕೆ 90 ಓವರ್ ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಸ್ನೆಲ್ ಪಟೇಲ್ (16) ಹಾಗೂ ಹಾರ್ವಿಕ್ ದೇಸಾಯಿ (13) ಅವರನ್ನು ಜೆ. ಸುಚಿತ್ ಸ್ಪಿನ್ ಬಲೆಗೆ ಬೀಳಿಸಿದರು. ತಂಡದ ಮೊತ್ತ 33 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜತೆಯಾದ ಭಾರತ ಟೆಸ್ಟ್ ತಂಡದ ವಿಶೇಷ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ ಜೋಡಿ ಮೂರನೇ ವಿಕೆಟ್ ಗೆ ಅದ್ಭುತ ಜತೆಯಾಟವಾಡಿತು. ಈ ಜೋಡಿಯು 263 ರನ್ ಜತೆಯಾಟವಾಡಿ ತಂಡಕ್ಕೆ ಭರ್ಜರಿ ಅಡಿಪಾಯ ಹಾಕುವಲ್ಲಿ ಯಶಸ್ವಿಯಾಯಿತು.
ನ್ಯೂಜಿಲೆಂಡ್ ಪ್ರವಾಸಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಕರ್ನಾಟಕ ಬೌಲರ್ ಗಳಿಗೆ ಬೆವರಿಳಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಸುದೀರ್ಘ ಅವಧಿ ಬ್ಯಾಟಿಂಗ್ ಮಾಡಿದರು. 238 ಎಸೆತಗಳನ್ನು ಎದುರಿಸಿದ ಅವರು ಅಜೇಯ 162 ರನ್ ಗಳಿಸಿದರು. ಇವರ ಅದ್ಭುತ ಶತಕದಲ್ಲಿ ಒಂದು ಸಿಕ್ಸರ್ ಹಾಗೂ 17 ಬೌಂಡರಿಗಳು ಒಳಗೊಂಡಿವೆ.
ಮತ್ತೊಂದು ತುದಿಯಲ್ಲಿ ಪೂಜಾರಗೆ ಸಾಥ್ ನೀಡಿದ ಶೆಲ್ಡನ್ ಜಾಕ್ಸನ್ ಕೂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಜಾಕ್ಸನ್ ಕರ್ನಾಟಕ ಬೌಲರ್ ಗಳ ವಿಶ್ವಾಸವನ್ನು ಕುಗ್ಗಿಸಿದರು. 191 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 99 ರನ್ ಗಳಿಸಿದ್ದು, ಶತಕ ಸಿಡಿಸಲು ಅವರಿಗೆ ಕೇವಲ ಒಂದು ರನ್ ಅಗತ್ಯವಿದೆ. ಕರ್ನಾಟಕ ಪರ ಜೆ.ಸುಚಿತ್ ಎರಡು ವಿಕೆಟ್ ಪಡೆದರು.