ಎಐಸಿಸಿ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯಾಗಬೇಕು : ಸಚಿವ ಸತೀಶ್
ಬೆಳಗಾವಿ 01: ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವ ವಿಷಯವು ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಹೇಳಿದರು.
ನಗರದ ಅಂಬೇಡ್ಕರ್ ಉದ್ಯಾನವದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದು ಎಐಸಿಸಿಗೆ ಮಾತ್ರ ಅಧಿಕಾರ ಇದೆ. ಒಬ್ಬೊಬ್ಬರು ಎರಡೂ ಹುದ್ದೆಯಲ್ಲಿ ಇರಬಾರದು ಎನ್ನುವುದು ಹೈಕಮಾ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದರು. ಬೆಳಗಾವಿ ಜಿಲ್ಲಾಧ್ಯಕ್ಷರ ನೇಮಕ ಮಾಡುವ ಕುರಿತು ಪಕ್ಷಾತೀತವಾಗಿ ಒಬ್ಬರ ಹೆಸರನ್ನು ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲದೆ, ಚಿಕ್ಕೋಡಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗುವುದು ಎಂದರು.
ಕಾರ್ಯಕರ್ತರ ನಡುವೆ ನಿಕಟ ಸಂಪರ್ಕಹೊಂದಿರಬೇಕು. ಕಾಂಗ್ರೆಸ್ ಕಚೇರಿಯಲ್ಲಿ ಇದ್ದು ಪಕ್ಷಕ್ಕೆ ಹೆಚ್ಚು ಸಮಯ ಕೊಡಬೇಕು ಇದೇ ಮಾನದಂಡದ ಮೇರೆಗೆ ಸಾಮಾನ್ಯ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ನೇಮಕ ಮಾಡಲಾಗುವುದು ಎಂದರು. ನಿಗಮ ಮಂಡಳ ನೇಮಕ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಇದೆ. ಈಗಾಗಲೇ 70ಅ ಆಗಿದೆ. 30ಅ ಇದೆ. ನಮ್ಮ ಮೇಲೆ ಜವಾಬ್ದಾರಿ ಇರುವುದು ನಿರ್ದೇಶಕರ ನೇಮಕ ಮಾಡುವುದು. ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಕಮಿಟಿ ಇದೆ. ಹಂತ ಹಂತವಾಗಿ ನೇಮಕ ಮಾಡಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯ ವಿಭಜನೆ ಮಾಡುವ ವಿಷಯ ಬಜೆಟ್‌ನಲ್ಲಿ ಇಲ್ಲ. ಹೊಸ ಜಿಲ್ಲೆಯಾಗಬೇಕು ಎಂಬ ಬೇಡಿಕೆ ಇದೆ. ಎಲ್ಲ ರೀತಿಯಿಂದ ಒಮ್ಮತ ಬರಬೇಕು ಅಷ್ಟೆ ಎಂದರು. ಕಳೆದ ಒಂದೂವರೆ ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನಪರ ಕೆಲಸ ಮಾಡಿದೆ. ಸರಕಾರದ ಮೇಲೆ ಜನರು ಸಾಕಷ್ಟು ನೀರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಮೂರು ಬಜೆಟ್ ಮಂಡಣೆ ಮಾಡಿ ಜನಪರ ಕೆಲಸ ಮಾಡುವುದಾಗಿ ತಿಳಿಸಿದರು.
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆಯಾಗಿದೆ. ಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು. ರಾಜ್ಯದಲ್ಲಿ ಮಳೆಯಿಂದ ಸಾಕಷ್ಟು ಸೇತುವೆಗಳು ಹಾಳಾಗಿವೆ. ಬಜೆಟ್‌ನಲ್ಲಿ ವಿಶೇಷವಾಗಿ ಸೇತುವೆ ನಿರ್ಮಾಣಕ್ಕೆ ಅನುದಾನ ಕೇಳುತ್ತೇವೆ ಎಂದರು. ಬಿಜೆಪಿಯವರು ಸರಕಾರದ ಮೇಲೆ ಭ್ರಷ್ಟಾಚಾರ ಆರೋಪದ ಕುರಿತು ಉತ್ತರಿಸಿದ ಅವರು, ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಿಜೆಪಿಯವರಿಗೆ ಕೇವಲ ಆರೋಪ ಮಾಡುವುದೇ ಕೆಲಸವಾಗಿದೆ ಎಂದರು. ಸಿ.ಟಿ.ರವಿ ಪ್ರಕರಣದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ತನಿಖೆ ನಡೆಯುತ್ತಿದೆ ಎಂದರು.