ನವದೆಹಲಿ 15: ದೇಶಾದ್ಯಂತ ಏಕರೂಪದ ಚಾಲನಾ ಪರವಾನಗಿ ವಿತರಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಒಂದು ದೇಶ-ಒಂದು ಡ್ರೈವಿಂಗ್ ಲೈಸನ್ಸ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ಮೂಲಕ ದೇಶಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರ (ಆರ್ಸಿ) ವಿತರಿಸುವುದು ಕೇಂದ್ರದ ಉದ್ದೇಶವಾಗಿದೆ.
2019ರ ಜುಲೈನಿಂದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ವಿನ್ಯಾಸ, ಬಣ್ಣದ ಡಿಎಲ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಮುಂದಿನ ಜುಲೈನಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು(ಆರ್‌ಸಿ) ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದ್ದು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಡಿಎಲ್ ಹಾಗೂ ಆರ್‌ಸಿಗಳ ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.
ಸ್ಮಾರ್ಟ್ ಕಾರ್ಡ್‌ಗಳಲ್ಲಿ ಡಿಎಲ್ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸಲಿದ್ದು, ಕ್ಯೂ ಆರ್ ಕೋಡ್ ಗಳನ್ನೂ ಈ ಕಾರ್ಡ್ ಗಳು ಹೊಂದಿರುತ್ತವೆ. ಅವುಗಳಲ್ಲಿ ಎನ್‌ಎಫ್‌ಸಿ(ನಿಯರ್ ಫೀಲ್ಡ್ ಕಮ್ಯುನಿಕೇಶನ್) ವೈಶಿಷ್ಟ್ಯವನ್ನೂ ಅಳವಡಿಸಲಾಗುತ್ತಿದ್ದು ಮೆಟ್ರೋ ಮತ್ತು ಎಟಿಎಂ ಕಾರ್ಡ್ ಗಳ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಟ್ರಾಫಿಕ್ ಪೊಲೀಸರು ವಿಶೇಷ ಸಾಧನಗಳ ಮೂಲಕ ಈ ಕಾರ್ಡ್‌ಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದು.
ನೂತನ ಡಿಎಲ್‌ನಲ್ಲಿ ಅಂಗಾಂಗ ದಾನ ಕುರಿತ ಚಾಲಕನ ಘೋಷಣೆ ಮತ್ತು ದೈಹಿಕ ವಿಕಲಚೇತನ ಅಥವಾ ಅಂಗವಿಕಲರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ಉಲ್ಲೇಖಗಳು ಇರಲಿವೆ ಎಂದು ತಿಳಿದುಬಂದಿದೆ.
ಅಲ್ಲದೇ ಮಾಲಿನ್ಯದ ಪ್ರಮಾಣ ಮತ್ತು ಇತರ ನಿಯಮಗಳನ್ನು ಆರ್‌ಸಿಯಲ್ಲಿ ಅಳವಡಿಸಲಾಗಿರುತ್ತದೆ. ಇದರಿಂದ ಮಾಲಿನ್ಯ ಪರೀಕ್ಷೆಯ ವೇಳೆ ಅನುಕೂಲವಾಗುತ್ತದೆ ಎಂದು ತಿಳಿದುಬಂದಿದೆ.