ಕಾನೂನು ಚೌಕಟ್ಟಿನಲ್ಲಿ ಹಬ್ಬಗಳನ್ನು ಆಚರಿಸಿ, ಅನ್ಯರಿಗೆ ತೊಂದರೆ ನೀಡಿದರೆ ಕಠಿಣಕ್ರಮ: ಡಿವೈಎಸ್ಪಿ ಎಚ್ಚರಿಕೆ

ಲೋಕದರ್ಶನ ವರದಿ

ಲಿಂಗಸುಗೂರು 24: ಹಿಂದೂ-ಮುಸಲ್ಮಾನರು ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ, ಸಹೋದರತೆ ನೆಲೆಸುವಂತೆ ನೋಡಿಕೊಳ್ಳಬೇಕು. ಯಾವುದೇ ಕಾನೂನು ಬಾಹಿರ ಕ್ರಮಗಳಿಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ ಪಿ ಹರೀಶ್ ಎಚ್ಚರಿಕೆ ನೀಡಿದ್ದಾರೆ. 

ಗಣೇಶ ಚತುರ್ಥಿ  ಹಾಗೂ ಮೊಹರಂ ಹಬ್ಬದ ನಿಮಿತ್ಯ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಿಸಬೇಕು. ಯವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಇಲಾಖೆ ಸಹಿಸುವುದಿಲ್ಲ. ಉಭಯ ಸಮುದಾಯದ ಮುಖಂಡರುಗಳು ಜವಾಬ್ದಾರಿ ಹೊತ್ತು, ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕೆಂದು ಡಿವೈಸ್ ಪಿ ಹರೀಶ್ ಮಾತನಾಡಿದರು. 

ಕಡ್ಡಾಯವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವವರು ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಮೈಕ್ ಪರವಾನಿಗೆ, ವಿದ್ಯುತ್ ಪರವಾನಿಗೆ, ಪುರಸಭೆಯ ಪರವಾನಿಗೆ ಸೇರಿ ನಿಯಮಾನುಸಾರ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಉತ್ಸವದ ಉತ್ಸಾಹದಲ್ಲಿ ಯುವಕರು ಮೈಮರೆತು ಇತರರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು. ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಮೂಲಕ ಸಮಸ್ಯೆಗೆ ಗುರಿಯಾಗಬೇಡಿ. ಕಾನೂನು ಚೌಕಟ್ಟಿನಲ್ಲಿ ಹಬ್ಬಗಳನ್ನು ಆಚರಣೆ ಮಾಡಿ ಎಂದು ಯುವಕರಿಗೆ ಡಿವೈಎಸ್ಪಿ ಸಲಹೆ ನೀಡಿದರು. 

ಸಿಪಿಎಸ್ ಯಶವಂತ ಬಿಸ್ನಳ್ಳಿ, ಪಿಎಸ್ಐ ಪ್ರಕಾಶರೆಡ್ಡಿ, ಮುಖಂಡರಾದ ಲಾಲಹ್ಮದ್ ಸಾಬ, ಗುಂಡಪ್ಪ ನಾಯಕ, ಪುರಸಭೆ ಮುಖ್ಯಾಧಿಕಾರಿ ಕೆಕೆ ಮುತ್ತಪ್ಪ, ಜೆಸ್ಕಾಂ ಎಇಇ ಬನ್ನಪ್ಪ ಸೇರಿ,  ಉಭಯ ಸಮುದಾಯದ ಮುಖಂಡರಾದ ಖಾದರಬಾಷಾ, ಅನೀಸ್ ಪಾಷಾ, ಲಿಂಗಪ್ಪ ಪರಂಗಿ, ಮೊಹ್ಮದ್ ರಫಿ, ಫಯಾಜ್ ಅಹ್ಮದ್, ನಾಗರಾಜ ತಿಪ್ಪಣ್ಣ,ಪರಶುರಾಮ ನಗನೂರು, ಎಕ್ಬಾಲ್ ಸೇರಿ ಸಭೆಯಲ್ಲಿ ಇತರರು ಇದ್ದರು.