ಸಂತ ಶರಣರ ಜಯಂತಿಗಳನ್ನು ಅಚ್ಚುಕಟ್ಟಾಗಿ ಆಚರಿಸಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

Celebrate the Jayantis of Saint Sharan in a proper manner - Additional District Collector Sidramesh


ಸಂತ ಶರಣರ ಜಯಂತಿಗಳನ್ನು ಅಚ್ಚುಕಟ್ಟಾಗಿ ಆಚರಿಸಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ 

ಕೊಪ್ಪಳ 26: ಏಪ್ರಿಲ್ 2 ರಂದು ದೇವರ ದಾಸಿಮಯ್ಯ ಜಯಂತಿ ಹಾಗೂ ಏಪ್ರಿಲ್ 10 ರಂದು ಭಗವಾನ್ ಮಹಾವೀರ ಜಯಂತಿ ಆಚರಿಸಲಾಗುತ್ತಿದ್ದು ಈ ಸಂತ, ಶರಣರ ಜಯಂತಿಗಳನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. 

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ವಿ.ಸಿ ಹಾಲ್‌ನಲ್ಲಿ ಕರೆದ ದೇವರ ದಾಸಿಮಯ್ಯ ಹಾಗೂ ಭಗವಾನ್ ಮಹಾವೀರ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಏಪ್ರಿಲ್ 2 ರಂದು ಬೆಳಿಗ್ಗೆ 10:30 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು ಈ ಸಂದರ್ಭದಲ್ಲಿ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿರಬೇಕು. ದೇವರ ದಾಸಿಮಯ್ಯನವರ ಕುರಿತು ಸಮಾಜದ ಮುಖಂಡರು ಮಾತನಾಡಬಹುದಾಗಿದೆ ಎಂದು ಹೇಳಿದರು. 

ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಏಪ್ರಿಲ್ 10 ರಂದು ಕೊಪ್ಪಳ ನಗರದ ಜೈನ ಮಂದಿರದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8:30 ಗಂಟೆಗೆ ಕೊಪ್ಪಳ ನಗರದ ಅಶೋಕ ವೃತ್ತದಿಂದ ಜವಾಹರ ರಸ್ತೆ. ಗಡಿಯಾರ ವೃತ್ತದ ಮಾರ್ಗವಾಗಿ ಜೈನ ಮಂದಿರದವರೆಗೆ ಭಗವಾನ್ ಮಹಾವೀರರ ಭಾವಚಿತ್ರದ ಮರವಣಿಗೆ ನಡೆಯಲಿದ್ದು ಇದರಲ್ಲಿ ಹೆಚ್ಚಿನ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು. 

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಜಯಂತಿಗಳ ಆಚರಣೆ ಮಾಡುವ ಉದ್ದೇಶ ಆ ಮಹಾನ್ ವ್ಯಕ್ತಿಗಳ ತತ್ವ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು. 

ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ನಾಗರಾಜ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪುಷ್ಪಲತಾ, ಕೊಪ್ಪಳ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷರಾದ ಶಿವಶಂಕರ್ ಚನ್ನಿ, ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣಪ್ಪ ಕೊಳ್ಳಿ, ದೇವಾಂಗ ಸಮಾಜದ ಮುಖಂಡರಾದ ಪ್ರಹ್ಲಾದ್ ಗೌಡ ಮೇದಿಕೇರಿ, ಚಂದ್ರಕಾಂತ್ ಬೆಟಗೇರಿ, ಮತ್ತು ಕೊಪ್ಪಳ ದಿಗಂಬರ ಜೈನ್ ಸಮಾಜದ ಜಿಲ್ಲಾಧ್ಯಕ್ಷರಾದ ಪದ್ಮಗೌಡ ಹೀರೆಗೌಡ, ದಿಗಂಬರ ಜೈನ್ ಸಮಾಜದ ಮುಖಂಡರಾದ ಭರತೇಶ ಪಾಟೀಲ್, ಸೋಮನಾಥ ಪಾಟೀಲ್, ಶಂಕರ್ ಗೌಡ್ ಪಾಟೀಲ್, ಅಭಿನಂದನ ಜೈನ್, ಹನುಮಾನ್ ಜೈನ್, ಹಿತೇಶ ಜೈನ್ ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.