19 ರಿಂದ ಬೆಳಗಾವಿ, ಮಣಗೂರು ನಡುವೆ ಸಂಚರಿಸುವ ರೈಲ್ವೆ ರದ್ದು- ಖಂಡನೀಯ
ಹೊಸಪೇಟೆ 12: ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳ ತಂಡ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಅಮೃತ್ ಭಾರತ್ ಯೋಜನೆ ಅಡಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಪರೀವೀಕ್ಷಣೆ ನಡೆಸಿತು.
ನಂತರ ನಗರದ ಹಂಪಿ ರಸ್ತೆಯಲ್ಲಿರುವ ವಿಜಯಶ್ರೀ ಹೆರಿಟೇಜ್‌ಗೆ ಆಗಮಿಸಿದ ನೈರುತ್ಯ ರೈಲ್ವೆ ವಲಯದ ಹಿರಿಯ ಉಪಪ್ರಧಾನ ವ್ಯವಸ್ಥಾಪಕರಾದ ಎಸ್.ಕೆ.ಜೈನ್‌ರವರನ್ನು ಬೇಟಿ ಮಾಡಿದ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ ಅವರ ನೇತೃತ್ವದಲ್ಲಿ ಬೇಡಿಕೆಯ ಮನವಿ ಪತ್ರ ಸಲ್ಲಿಸಿತು.
ಕಳೆದ ಹಲವು ವರ್ಷಗಳಿಂದ ಬೆಳಗಾವಿ, ಹೊಸಪೇಟೆ, ಹೈದ್ರಬಾದ್, ಮಣಗೂರು ನಡುವೆ ಸಂಚರಿಸುತ್ತಿರುವ ವಿಶೇಷ ರೈಲನ್ನು (ಗಾಡಿ ಸಂಖ್ಯೆ : 07335/36) ಇದೇ ತಿಂಗಳು 19 ರಿಂದ ರದ್ದುಗೊಳಿಸಲಾಗುದೆಂಬ ರೈಲ್ವೆ ಇಲಾಖೆಯ ಆದೇಶ ಖಂಡನೀಯವಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯಕ್ಕೆ ನೇರ ಸಂಪರ್ಕಗೊಳಿಸುವ ಏಕೈಕ ರೈಲು ಇದಾಗಿದ್ದು, ಸಂಚಾರ ರದ್ದುಗೊಳಿಸಿರುವುದರಿಂದ ಮಂತ್ರಾಲಯ ಮತ್ತು ಹೈದ್ರಬಾದ್‌ಗೆ ತೆರಳುವ ಪ್ರಯಾಣಿಕರಿಗೆ ವಿಫರೀತ ತೊಂದರೆ ಆಗುತ್ತದೆ. ಯಾವುದೇ ಸಕಾರಣಗಳಿಲ್ಲದೆ ಪ್ರಯಾಣಿಕರ ಸಂಚಾರ ದಟ್ಟನೆಯ ರೈಲನ್ನು ರದ್ದುಪಡಿಸಿರುವುದು ಸೂಕ್ತವಲ್ಲ. ತೆಲಂಗಾಣ ರಾಜ್ಯದಿಂದ ವಿಶ್ವಪಾರಂಪರಿಕ ತಾಣವಾದ ಹಂಪಿಗೆ ಈ ರೈಲು ನೇರ ಸಂಪರ್ಕ ಕಲ್ಪಿಸುತ್ತದೆ.
ಆದುದರಿಂದ ಮಂತ್ರಾಲಯ ಮತ್ತು ಹೈದ್ರಬಾದ್‌ಗೆ ತೆರಳುವ ಭಕ್ತಾದಿಗಳು ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಈ ರೈಲಿನ ಸೇವೆಯನ್ನು ನಿರಂತರವಾಗಿ ಮುಂದುವರೆಸಿ ಈ ವಿಶೇಷ ರೈಲನ್ನು ಖಾಯಂಗೊಳಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ವಿಭಾಗಿಯ ವ್ಯವಸ್ಥಾಪಕರಾದ ಸಂತೋಷ ಹೆಗಡೆ ಹಾಗೂ ಇತರೆ ಅಧಿಕಾರಿಗಳು, ಅಶೋಕ್ ಜೀರೆ, ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಮುಖಂಡರಾದ ವೈ.ಯಮುನೇಶ್, ಜಿ.ಉಮಾಮಹೇಶ್ವರ್, ಯು.ಆಂಜನೇಯಲು, ಮುಂತಾದವರು ಉಪಸ್ಥಿತರಿದ್ದರು.