ವೆಬ್ ಕಾಸ್ಟಿಂಗ್ ನಿಗಾ ಘಟಕಕ್ಕೆ ಸಿಇಓ ಭೇಟಿ: ಪರೀಕ್ಷಾ ಕಾರ್ಯಕ್ಕೆ ಪ್ರಶಂಸೆ

CEO visits webcasting monitoring unit: Praise for testing work

ವೆಬ್ ಕಾಸ್ಟಿಂಗ್ ನಿಗಾ ಘಟಕಕ್ಕೆ ಸಿಇಓ ಭೇಟಿ: ಪರೀಕ್ಷಾ ಕಾರ್ಯಕ್ಕೆ ಪ್ರಶಂಸೆ   

ಕೊಪ್ಪಳ 24: 2025ರ ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆ-1ರ ಪರೀಕ್ಷೆಗಳು ಕೊಪ್ಪಳ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದು, ವೆಬ್ ಕಾಸ್ಟಿಂಗ್ ನಿಗಾ ಘಟಕಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಸೋಮವಾರ ಭೇಟಿ ನೀಡಿ, ಅಲ್ಲಿನ ಕಾರ್ಯವನ್ನು ಪರೀಶೀಲಿಸಿದರು. 

ಕೆ.ಎಸ್‌.ಇ.ಎ.ಬಿ ಬೆಂಗಳೂರು ಇವರ ಪರೀಕ್ಷಾ ನಿಯಮಾನುಸಾರ ಕೊಪ್ಪಳ ಜಿಲ್ಲೆಯ ಒಟ್ಟು 73 ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್  ಮೂಲಕ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಕ್ಯಾಮರಾಗಳ ಆನ್‌ಲೈನ್  ಇರುವು ಕಂಡುಬಂದಿದೆ. ಈಗಾಗಲೇ ನಡೆದ ಕನ್ನಡ ಮತ್ತು ಗಣಿತ ವಿಷಯಗಳ ಪರೀಕ್ಷೆಗಳು ಯಾವುದೇ ದೂರು ಬಾರದೆ ಹಾಗೂ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಾಗದೆ ಸುಸುತ್ರವಾಗಿ ಶೇ.100ರಷ್ಟು ಅಚ್ಚುಕಟ್ಟಾಗಿವೆ ಎಂಬ ಕಲ್ಯಾಣ ಕರ್ನಾಟಕ ವಿಭಾಗದ ಮಾಹಿತಿ ಹಿನ್ನೆಲೆಯಲ್ಲಿ ಸಿಇಓ ಅವರು ಜಿಲ್ಲಾಡಳಿತ ಭವನದ ಎನ್‌.ಐ.ಸಿ ಕೇಂದ್ರದಲ್ಲಿರುವ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯ ವೆಬ್ ಕಾಸ್ಟಿಂಗ್ ನಿಗಾ ಘಟಕಕ್ಕೆ ತೆರಳಿ ವೀಕ್ಷಣೆ ಮಾಡಿದರು. ಬಳಿಕ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ನಿಯಮಾನುಸಾರ ಪರೀಕ್ಷೆ ನಡೆಸುತ್ತಿರುವುದನ್ನು ವೀಕ್ಷಿಸಿ, ಈ ಪರೀಕ್ಷಾ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದರು.  

ವೆಬ್ ಕಾಸ್ಟಿಂಗ್ ನಿಗಾ ಘಟಕದಲ್ಲಿ ಮುಖ್ಯಸ್ಥರು ಮತ್ತು ಸದಸ್ಯರನ್ನೊಳಗೊಂಡು ಒಟ್ಟು 35 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ನಾಲ್ಕು ತಂಡಗಳಲ್ಲಿ ಪ್ರತಿಯೊಬ್ಬ ತಂಡಕ್ಕೆ ಒಬ್ಬ ಉಪನ್ಯಾಸಕರನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಪ್ರತಿಯೊಂದು ತಂಡದಲ್ಲಿ 1 ರಿಂದ 5 ಸದಸ್ಯರನ್ನು ನೇಮಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ ಅವರ ಉಸ್ತುವಾರಿಯಲ್ಲಿ ಹಾಗೂ ಜಿಲ್ಲಾ ವೆಬ್ ಕಾಸ್ಟಿಂಗ್ ನೋಡಲ್ ಅಧಿಕಾರಿಗಳು ಆಗಿರುವ ಡಯಟ್ ಉಪನ್ಯಾಸಕರಾದ ಗವಿಸಿದ್ದೇಶ್ವರ ಸ್ವಾಮಿ ರಾಚಯ್ಯ ಬೆಣಕಲ್‌ಮಠ ಅವರ ಮೇಲುಸ್ತುವಾರಿಯಲ್ಲಿ ಈ ಕಾರ್ಯವು ಅಚ್ಚುಕಟ್ಟಾಗಿ ನಡೆಯುತ್ತಿದೆ.