ನವದೆಹಲಿ,
ಡಿ 16 ಸಂಪ್ರದಾಯದಂತೆ ಬಜೆಟ್ ಪೂರ್ವಭಾವಿ ಸಮಾಲೋಚನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಸೋಮವಾರದಿಂದ ಆರಂಭಿಸಲಿದ್ದು ವಿವಿಧ ಭಾಗಿದಾರರಿಂದ ಅಗತ್ಯ ಮಾಹಿತಿ ಕಲೆ ಹಾಕಲಿದ್ದಾರೆ. ಆರ್ಥಿಕ ಪ್ರಗತಿ ಉತ್ತೇಜನಕ್ಕೆ ಕೈಗಾರಿಕಾ ಸಂಸ್ಥೆಗಳು,
ಕೃಷಿ ಸಂಘಟನೆಗಳು ಮತ್ತು ಅರ್ಥಶಾಸ್ತ್ರಜ್ಞರೊಂದಿಗೆ ಹಣಕಾಸು ಸಚಿವರು ಸಮಾಲೋಚನೆ ನಡೆಸಲಿದ್ದಾರೆ. ಮೋದಿ ಸರ್ಕಾರದ ಎರಡನೇ ಅಧಿಕಾರಾವಧಿಯಲ್ಲಿ ನಿರ್ಮಲಾ ಸೀತಾರಾಮನ್
ತಮ್ಮ ಎರಡನೇ ಬಜೆಟ್ ಅನ್ನು 2020 ರ ಫೆಬ್ರವರಿ 1 ರಂದು ಮಂಡಿಸುವ ನಿರೀಕ್ಷೆ ಇದೆ. ಬಜೆಟ್ ಪೂರ್ವಭಾವಿ ಸಮಾಲೋಚನೆ ಡಿ 16 ರಿಂದ ಆರಂಭವಾಗಿ ಡಿ
23 ರವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ. ಆರು
ವರ್ಷಗಳ ಕನಿಷ್ಠ ಮಟ್ಟಕ್ಕಿಳಿದಿರುವ ದೇಶದ ಆರ್ಥಿಕ ಸ್ಥಿತಿಯ ಪುನಶ್ಚೇತನ ಈ ಬಾರಿಯ ಬಜೆಟ್ ನ ಮುಖ್ಯ
ಗುರಿಯಾಗಿದೆ. ಸೋಮವಾರ ಬೆಳಗ್ಗೆ ಸ್ಟಾರ್ಟ್ ಅಪ್,
ಫಿನ್ ಟೆಕ್ ಮತ್ತು ಡಿಜಿಟಲ್ ವಲಯದ ಭಾಗಿದಾರರೊಂದಿಗೆ ಸಮಾಲೋಚನೆ ನಡೆಸಿದರೆ ನಂತರ ಹಣಕಾಸು ವಲಯ ಮತ್ತು
ಬಂಡವಾಳ ಮಾರುಕಟ್ಟೆ ಪ್ರತಿನಿಧಿಗಳೊಂದಿಗೆ ಸಚಿವರು ಚರ್ಚೆ ನಡೆಸಲಿದ್ದಾರೆ. ರಫ್ತು ಸ್ಪರ್ಧಾತ್ಮಕತೆ, ಖಾಸಗಿ ಬಂಡವಾಳ ಹೂಡಿಕೆ, ರಾಜ್ಯಗಳ
ಪಾತ್ರ ಮೊದಲಾದ ವಿಷಯಗಳ ಕುರಿತಂತೆ ವಿವಿಧ ವಲಯಗಳ ಸಂಬಂಧಿತರ ನಿಲುವುಗಳನ್ನು ಸರ್ಕಾರ ಕೋರಿದೆ ಎಂದು
ಮೂಲಗಳು ತಿಳಿಸಿವೆ. ಕಾರ್ಪೊರೇಟ್ ತೆರಿಗೆ ಕಡಿತ ನಿರ್ಧಾರ
ಪ್ರಕಟಿಸಿರುವ ಸರ್ಕಾರದಿಂದ ವೇತನದಾರರೂ ಕೂಡ ವೈಯಕ್ತಿಕ ತೆರಿಗೆ ಕಡಿತ ನಿರೀಕ್ಷಿಸಿದ್ದಾರೆ. ಎಲ್ಲ ಆದಾಯ ಸ್ತರದ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೂ
ಐದು ಲಕ್ಷ ರೂ ವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ವಿಧಿಸುವಂತೆ ಸಂಸ್ಥೆಗಳು ಆಗ್ರಹಿಸಿವೆ.