ಗವಿಸಿದ್ಧೇಶ್ವರ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಕೊಪ್ಪಳ 22: ನಗರದ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಎನ್.ಐ.ಎಫ್.ಎ.ಎ, ಭಾರತೀಯ ರೆಡ್ ಕ್ರಾಸ್ ಘಟಕ, ಕೊಪ್ಪಳ ಮತ್ತು ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕ, ಎನ್.ಎಸ್.ಎಸ್. ಇವರ ಸಹಯೋಗದಲ್ಲಿ ಸಂವೇದನಾ-2 ಅಡಿಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ರಕ್ತದಾನ ಶಿಬಿರದ ಪ್ರಯುಕ್ತ ಮಹಾವಿದ್ಯಾಲಯದ ಸುಮಾರು 40 ಜನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ರಕ್ತದಾನಗೈದರು. ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಚನ್ನಬಸವ ಅವರು ಉದ್ಘಾಟಿಸಿ, ರಕ್ತದಾನದ ಮಹತ್ವ ಮತ್ತು ರಕ್ತದಾನ ಮಾಡುವುದರಿಂದ ಉಂಟಾಗುವ ಅನುಕೂಲಗಳನ್ನು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಶರಣಪ್ಪ ಚೌವ್ಹಾಣ, ಡಾ. ಜಾಲಿಹಾಳ ಶರಣಪ್ಪ, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ಮಂಜುನಾಥ ಗಾಳಿ, ಐಕ್ಯೂಎಸಿ ಸಂಯೋಜಕರಾದ ಡಾ. ಅರುಣಕುಮಾರ ಭಾಗವಹಿಸಿದ್ದರು. ಜೊತೆಗೆ ಪ್ರಾಧ್ಯಾಪಕರಾದ ಡಾ. ಮಂಜುನಾಥ ಎಂ, ಡಾ. ವೆಂಕಟೇಶ ನಾಯ್ಕ, ಡಾ. ನಾಗರಾಜ ದಂಡೋತಿ ಮತ್ತಿತರು ಉಪಸ್ಥಿತರಿದ್ದರು.