ಸುಸ್ಥಿರ ಅಭಿವೃದ್ಧಿಗೆ ಜೀವವೈವಿಧ್ಯ ರಕ್ಷಣೆ ಅತ್ಯಗತ್ಯ-ವಿಜಯಲಕ್ಷ್ಮಿ
ಹುಬ್ಬಳ್ಳಿ 27 : ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಾಡು ನಾಶ, ನಗರೀಕರಣ, ಕೈಗಾರಿಕೆ ಸ್ಥಾಪನೆಗಾಗಿ ಅರಣ್ಯಭೂಮಿ ಪರಿವರ್ತನೆ, ಜೀವ ಪ್ರಭೇದಗಳ ವಾಸಸ್ಥಾನ ನಾಶ, ಇವೆಲ್ಲವೂ ಜೀವ ವೈವಿಧ್ಯತೆಯ ಸರಪಳಿಗೆ ಪೆಟ್ಟು ನೀಡುತ್ತಿವೆ. ಅದರಲ್ಲೂ ಮುಖ್ಯವಾಗಿ ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಕಾಡ್ಗಿಚ್ಚು, ಹವಾಮಾನ ಬದಲಾವಣೆಯಿಂದಾಗಿ ಜಗತ್ತಿನಾದ್ಯಂತ ಸೂಕ್ಷ್ಮ ಜೀವ ವೈವಿಧ್ಯ ಈಗ ಅಪಾಯಕಾರಿ ಸ್ಥಿತಿಯಲ್ಲಿರುವುದು ತುಂಬಾ ಶೋಚನೀಯವಾಗಿದೆ ಎಂದು ನೇಕಾರನಗರದ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮಿ ಹಂಚಿನಾಳ ಅಭಿಪ್ರಾಯಪಟ್ಟರು.
ಶಾಲೆಯ ಜಗದೀಶ ಚಂದ್ರ ಬೋಸ್ ಇಕೋ ಕ್ಲಬ್ ವತಿಯಿಂದ ಏರಿ್ಡಸಿದ್ದ ಇಕೋ ಕ್ಲಬ್ ಚಟುವಟಿಕೆಗಳ ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹವಾಗುಣ ಮತ್ತು ಜೀವವೈವಿಧ್ಯ ಸಂರಕ್ಷಣೆ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಜಗತ್ತಿನಾದ್ಯಂತ ಎಲ್ಲ ರಾಷ್ಟ್ರಗಳು ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿಜ್ಞಾನ ಸಂವಹನಕಾರ ರಾಜು. ಭೂಶೆಟ್ಟಿ ಮಾತನಾಡಿ ವಿಸ್ಮಯಗಳ ತವರೂರು ಈ ಭೂಮಿಯಲ್ಲಿ ಅದೆಷ್ಟು ಜೀವ ಜಂತುಗಳಿವೆಯೋ, ಲೆಕ್ಕಕ್ಕೆ ಸಿಕ್ಕವು ಕೆಲವಷ್ಟುಗಳಾದರೆ ಲೆಕ್ಕಕ್ಕೆ ಸಿಗದವುಗಳ ಸಂಖ್ಯೆ ಇಂತಿಷ್ಟು ಎಂದು ಹೇಳುವುದು ಅಸಾಧ್ಯದ ಮಾತು. ಈ ವಿಶ್ವದ ಸೌಂದರ್ಯ ಅಡಗಿರುವುದೇ ಜೀವ ವೈವಿಧ್ಯಗಳಿಂದಾಗಿ. ಭೂಮಿ ಮೇಲಿರುವ ಹಲವು ಕ್ರಿಮಿ, ಕೀಟಗಳು, ಪ್ರಾಣಿ, ಪಕ್ಷಿಗಳು ನಮ್ಮ ಜೀವನಕ್ಕೆ ನೆರವಾಗುತ್ತವೆ. ಸುಸ್ಥಿರ ಅಭಿವೃದ್ಧಿಗೆ ನಮ್ಮಲ್ಲಿರುವ ಜೀವ ವೈವಿಧ್ಯ ತುಂಬಾ ಅಗತ್ಯವಾಗಿದೆ. ಜೀವ ವೈವಿಧ್ಯತೆ ಹಾಗೂ ಅದರ ವಿಶೇಷತೆ ಕುರಿತ ಅರಿವು ಪ್ರತಿಯೊಬ್ಬರಿಗೂ ಇರಬೇಕಿದೆ. ಜೀವ ವೈವಿಧ್ಯ ಮಾನವನ ಬದುಕಿಗೆ ಹಾಗೂ ಜೀವರಾಶಿಗಳ ಉಳಿವಿಗೆ ಮತ್ತು ಪರಿಸರದ ಸಮತೋಲನಕ್ಕೆ ಅತ್ಯಂತ ಅವಶ್ಯಕವಾಗಿದೆ. ಒಂದು ಪರಿಸರ ವ್ಯವಸ್ಥೆಯು ವಿಭಿನ್ನ ಪ್ರಭೇದದ ಜೀವಿಗಳ ಗುಂಪನ್ನು ಅವಲಂಬಿಸಿರುತ್ತದೆ. ಆದರೆ ಜೀವ ವೈವಿಧ್ಯತೆಯ ಆಪತ್ತಿನಿಂದ ಸಸ್ಯ ಅಥವಾ ಪ್ರಾಣಿಗಳ ಅಳಿವು ಅಥವಾ ಅವುಗಳ ಸಂಖ್ಯೆ ಕಡಿಮೆಯಾಗುವುದರಿಂದ ಸಂಪೂರ್ಣ ಆಹಾರ ಸರಪಳಿಗೆ ಆಪತ್ತು ಬಂದೊದಗುತ್ತದೆ. ಇದರಿಂದಾಗಿ ಪರಿಸರ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಬಹುದಾದ ಆತಂಕ ಉಂಟಾಗುತ್ತದೆ ಎಂದರು.
ಶಾಲೆಯ ಇಕೋ ಕ್ಲಬ್ ಸಂಚಾಲಕರಾದ ವಿಜ್ಞಾನ ಶಿಕ್ಷಕಿ ಇಂದಿರಾ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಇಕೋ ಕ್ಲಬ್ ಚಟುವಟಿಕೆಗಳ ಕುರಿತು ತಿಳಿಸಿದರು. ಹಿರಿಯ ಶಿಕ್ಷಕರಾದ ಫುಲ್ಲಿ ಹಾಗೂ ಎಲ್ಲ ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.