ಗುಣಾತ್ಮಕ ಮೌಲ್ಯಮಾಪನದಿಂದ ಉತ್ತಮ ಫಲಿತಾಂಶ: ಡಾ ಈಶ್ವರ ಉಳ್ಳಾಗಡ್ಡಿ

ಗುಣಾತ್ಮಕ ಮೌಲ್ಯಮಾಪನದಿಂದ ಉತ್ತಮ ಫಲಿತಾಂಶ: ಡಾ ಈಶ್ವರ ಉಳ್ಳಾಗಡ್ಡಿ Best result from qualitative evaluation: Dr. Ishwar Ullagaddi

ಗುಣಾತ್ಮಕ ಮೌಲ್ಯಮಾಪನದಿಂದ ಉತ್ತಮ ಫಲಿತಾಂಶ: ಡಾ ಈಶ್ವರ ಉಳ್ಳಾಗಡ್ಡಿ 

ಧಾರವಾಡ, 16 ; ‘ನಿಪುನ್ ಭಾರತದ ಅಂಗವಾದ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎಫ್‌ಎಲ್‌ಎನ್) ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಲಿದೆ. ಇದನ್ನು ಗುಣಾತ್ಮಕ ಮೌಲ್ಯಮಾಪನದಿಂದ ಮಾತ್ರ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬಹುದು, ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಅವರು ಹೇಳಿದರು.  

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಭಾರತದಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಉಪಕ್ರಮಗಳ ಅಧ್ಯಯನ’ದ ಪರಾಮರ್ಶಾ ಸಭೆಯಲ್ಲಿ ಅವರು ಮಾತನಾಡಿದರು.  

‘ಪ್ರತಿಯೊಬ್ಬ ಶಿಕ್ಷಕರು ಚಟುವಟಿಕೆಯಾಧಾರಿತ ಬೋಧನಾ ಕ್ರಮಗಳನ್ನು ರೂಢಿಸಿಕೊಂಡು ಮಕ್ಕಳು ಸ್ಪಷ್ಟ ಓದು, ಶುದ್ಧ ಬರಹ ಮತ್ತು ಸರಳ ಗಣಿತವನ್ನು  ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಧಿಕಾರಿಗಳು ಇದನ್ನು ಮೇಲ್ವಿಚಾರಣೆ ಮಾಡುವುದನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿ, ಶಿಕ್ಷಕರಿಗೆ ರಚನಾತ್ಮಕ ಮಾರ್ಗದರ್ಶನ ಮಾಡಬೇಕು, ಎಂದರು.  

ನವದೆಹಲಿಯ ಎನ್‌ಸಿಇಆರ್‌ಟಿಯ ಮೂಲ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಪ್ರೊ.ಸುನಿತಿ ಸನ್ವಾಲ್ ಮಾತನಾಡಿ, ‘ಭಾರತದಲ್ಲಿ ನಿಪುನ್ ಭಾರತದ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಉಪಕ್ರಮಗಳನ್ನು ಐದು ಹಂತದಲ್ಲಿ ಕಾರ್ಯಗತಗೊಳಿಸಲಾಗುತ್ತದೆ,’ ಎಂದರು.  

ಎಫ್‌ಎಲ್‌ಎನ್ ಮಿಷನ್ ಅಡಿಯಲ್ಲಿ ತಯಾರಿಸಿದ ಎಲ್‌ಟಿಎಂಗಳನ್ನು ಅಧ್ಯಯನ ಮಾಡುವುದು. ತರಗತಿಯ ಬೋಧನಾ ವಿಧಾನಗಳು ಮತ್ತು ಪಠ್ಯ ಸಾಮಗ್ರಿಗಳ ಬದಲಾವಣೆ ದಾಖಲಿಸುವುದು. ಶಿಕ್ಷಕರ ತರಬೇತಿ ಹಾಗೂ ನಿರಂತರ ವೃತ್ತಿಪರ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಅಧ್ಯಯನ ಮಾಡಬೇಕಾಗಿದೆ, ಎಂದು ಹೇಳಿದರು.  

ಪೋಷಕರು ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಮೌಲ್ಯಮಾಪನ ಮಾಡುವುದು ಪ್ರಮುಖವಾಗಿದೆ. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎಫ್‌ಎಲ್‌ಎನ್) ಮಿಷನ್‌ನ ಅನುಷ್ಠಾನದಲ್ಲಿ ಇರುವ ಲೋಪ ದೋಷಗಳನ್ನು ಗುರುತಿಸುವುದರಿಂದ, ಇದನ್ನು ಸುಧಾರಿಸಬಹುದು, ಎಂದರು.  

ಎಫ್‌ಎಲ್‌ಎನ್ ಉಪಕ್ರಮಗಳನ್ನು ಎರಡು ಹಂತದಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಗೂಗಲ್ ಫಾರ್ಮ್‌ಗಳ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ದತ್ತಾಂಶ ಸಂಗ್ರಹಿಸುವುದು ಮತ್ತು ತರಗತಿ ವೀಕ್ಷಣೆಗಳು ಹಾಗೂ ಗುಂಪು ಚರ್ಚೆಗಳ ಮೂಲಕ ಅಧ್ಯಯನ ಕೈಗೊಳ್ಳಲಾಗುತ್ತದೆ, ಎಂದರು.  

ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕರಾದ(ಅಭಿವೃದ್ಧಿ) ಪ್ರಮಿತಾ ಅದೋನಿ ಅವರು ಮಾತನಾಡಿ, ‘ಕೇಂದ್ರ ಸರ್ಕಾರದ ಎಫ್‌ಎಲ್‌ಎನ್ ಯೋಜನೆಗೆ ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ,’ ಎಂದರು. 

ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಕುರಿತು ವಿವರಿಸಿದರು. ಸಮಗ್ರ ಶಿಕ್ಷಣದ ಹಿರಿಯ ಕಾರ್ಯಕ್ರಮ ಅಧಿಕಾರಿ ಚಂದ್ರಶೇಖರ್ ಅವರು ಮಾತನಾಡಿ, ‘ಪ್ರೌಢಶಿಕ್ಷಣದಲ್ಲಿ ಉತ್ತಮ ಫಲಿತಾಂಶವನ್ನು ನೀರೀಕ್ಷಿಸುವುದಾದರೇ, ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ನೀಡಬೇಕು. ಪ್ರತಿಯೊಬ್ಬರಿಗೂ ಬುನಾದಿ ಹಂತದಲ್ಲಿ ಉತ್ತಮ ಶಿಕ್ಷಣ ನೀಡುವುದು ಬಹಳ ಪ್ರಮುಖವಾಗಿರುತ್ತದೆ, ಎಂದರು.  

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳಾದ ಎಸ್ ಎಸ್ ಕೆಳದಿಮಠ, ಗೀರೀಶ್ ಪದಕಿ, ರಾಜ್ಯದ ವಿವಿಧ ಜಿಲ್ಲೆಗಳ ಡಯಟ ಪ್ರಾಂಶುಪಾಲರು, ಉಪನ್ಯಾಸಕರು, ವಿವಿಧ ತಾಲ್ಲೂಕುಗಳ ಕ್ಷೇತ್ರ ಶಿಕ್ಷಾಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.  

ಶೈಲಾ ನಾಯಕ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಜಯಶ್ರೀ ಕಾರೇಕರ ಸ್ವಾಗತಿಸಿದರು. ಕುಮಾರ ಹುಲಗೂರ ನಿರೂಪಿಸಿದರು. ಡಾ.ಪೂಜಾ ಪಾಟೀಲ ವಂದಿಸಿದರು.