ಬಳ್ಳಾರಿ: ಜಿಲ್ಲಾ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Bellary: International Women's Day celebrated at the District Court

ಬಳ್ಳಾರಿ: ಜಿಲ್ಲಾ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 

ಬಳ್ಳಾರಿ 08: ಮಹಿಳೆ ಮತ್ತು ಪುರುಷ ಇಬ್ಬರು ಬಂಡಿಯ ಎರಡು ಚಕ್ರಗಳಿದ್ದಂತೆ. ಇಬ್ಬರೂ ಜೊತೆಗೂಡಿ ಸಮನಾಗಿ ಚಲಿಸಿದಾಗ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಮತ್ತು ರೀಡ್ಸ್‌ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ತಾಳೂರು ರಸ್ತೆಯ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾಜದಲ್ಲಿ ಪುರುಷನ ಸಾಧನೆಯ ಹಿಂದೆ ಮಹಿಳೆ ಇರುವ ಹಾಗೆ ಅಭಿವೃದ್ಧಿ ಹೊಂದುತ್ತಿರುವ ಮಹಿಳೆ ಹಿಂದೆಯೂ ಸಹ ಪುರುಷ ಇರುತ್ತಾನೆ. ಹಾಗಾಗಿ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾಜದ ಕಣ್ಣುಗಳಿದ್ದಂತೆ ಎಂದು ಅವರು ಅಭಿಮತ ವ್ಯಕ್ತಪಡಿಸಿದರು. 

1908 ರಲ್ಲಿ ಮಹಿಳಾ ಕಾರ್ಮಿಕರು ಕಾರ್ಖಾನೆಗಳಲ್ಲಿ ಕೆಲಸದ ಸಮಯ ಮತ್ತು ಸಮಾನ ವೇತನ ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳಿಗಾಗಿ ಪ್ರತಿಭಟನೆ ನಡೆಸಿದರು. ಬಳಿಕ ತಮ್ಮ ಎಲ್ಲಾ ಸೌಲಭ್ಯಗಳನ್ನು ಅವರು ಪಡೆದುಕೊಂಡರು. ಈ ಪ್ರತಿಭಟನೆಯಿಂದ ಪ್ರಪಂಚದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲು ಕಾರಣವಾಯಿತು ಎಂದು ತಿಳಿಸಿದರು. 

ಕಾನೂನಿನಲ್ಲಿ ಮಹಿಳೆಯರಿಗಾಗಿ ಏನೇನು ಸೌಲಭ್ಯಗಳಿವೆ ಎಂಬುದು ಅರಿಯಬೇಕು. ಸಮಾಜದಲ್ಲಿ ಬಾಲ್ಯವಿವಾಹ, ವರದಕ್ಷಿಣೆ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ವಿಚ್ಛೇದನ, ಮಾನಸಿಕ ಹಾಗೂ ದೈಹಿಕ ಹಿಂಸೆ ಮುಂತಾದ ಹಲವಾರು ಸಮಸ್ಯೆಗಳಿಗೆ ಕಾಯ್ದೆ-ಕಾನೂನುಗಳಿದ್ದು, ಮಹಿಳೆಯರು ಇವುಗಳನ್ನು ಅರಿತುಕೊಳ್ಳಬೇಕು ಎಂದು ನ್ಯಾಯಾಧೀಶೆ ಕೆ.ಜಿ.ಶಾಂತಿ ಅವರು ತಿಳಿಸಿದರು.  

ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಬೇಕು. ಆದರೆ ಮಹಿಳೆಯರ ಸ್ವಾತಂತ್ರ್ಯ ಸ್ವೇಚ್ಛಾಚಾರವಾದುದಲ್ಲ ಎಂಬುದು ಅರಿಯಬೇಕು. ಮಹಿಳೆಯರು ಉತ್ತಮ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 

ಮಹಿಳೆಯು ಮಾತೃ ಸ್ವರೂಪಿ. ತನ್ನ ಜೀವನದಲ್ಲಿ ಎಲ್ಲಾ ಹಂತದ ಕಷ್ಟಗಳನ್ನು ಸಹನೆಯಿಂದ ದಾಟಿಕೊಂಡು ಮುನ್ನಡೆಯುತ್ತಾಳೆ. ಈ ಹಿಂದೆ ಮಹಿಳೆಯು ಕೇವಲ ಅಡುಗೆ ಕೋಣೆಗೆ ಮಾತ್ರ ಸೀಮಿತವಾಗುತ್ತಿದ್ದಳು. ಆದರೆ ಪ್ರಸ್ತುತ ಸಮಾಜದ ಎಲ್ಲಾ ರಂಗಗಳಲ್ಲಿ ಪುರುಷನ ಸಮಾನಾಗಿ ಮಹಿಳೆಯರು ಅಭಿವೃದ್ಧಿ ಹೊಂದಿದ್ದಾರೆ ಎಂದರು. 

ಮಹಿಳೆಯರು ತಮ್ಮಲ್ಲಿನ ಕೀಳರಿಮೆ ಬಿಡಬೇಕು. ಧೃತಿಗೇಡಬಾರದು. ಏನೇ ಸಮಸ್ಯೆ ಬಂದರೂ ತಾವು ಅಂದುಕೊಂಡ ಗುರಿ ತಲುಪಿ ಗೆಲುವಿನ ಹಾದಿ ಕಂಡುಕೊಳ್ಳಬೇಕು. ಆಡು ಮುಟ್ಟದ ಸೊಪ್ಪಿಲ್ಲ-ಮಹಿಳೆಯರಿಲ್ಲದ ಕ್ಷೇತ್ರವಿಲ್ಲ ಎಂಬಂತೆ ನನ್ನಿಂದ ಎಲ್ಲವೂ ಸಾಧ್ಯ ಎಂಬ ಸಂಕಲ್ಪ ಹೊಂದಬೇಕು ಎಂದು ಕರೆ ನೀಡಿದರು. 

ಮುಖ್ಯವಾಗಿ ಮಹಿಳೆಯರು ಗರಿಕೆ ಹುಲ್ಲಿನಂತೆ ಬೆಳೆಯಬೇಕು. ಆ ಹುಲ್ಲನ್ನು ಏಷ್ಟೇ ತುಳಿದರೂ ಅದು ಮತ್ತೆ ಮತ್ತೆ ಚಿಗುರೊಡೆಯುತ್ತದೆ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದೆಡೆ ಗಮನ ಹರಿಸಬೇಕು. ಸಕಾರತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು, ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಘವೇಂದ್ರ ಗೌಡ.ಬಿ.ಜಿ., 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಜಿ.ಪ್ರಮೋದಾ, 4ನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ವಾಸುದೇವ ರಾಧಕಾಂತ್ ಗುಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್‌.ಎನ್‌.ಹೊಸಮನೆ, ಒಂದನೇ ಅಪರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಅಪರ್ಣ, ಎರಡನೇ ಅಪರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ನಸ್ರತ್ ಮುಖ್ತಾರ್ ಅಹ್ಮದ್ ಖಾನ್ ಸೇರಿದಂತೆ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ ವರ್ಗ, ರೀಡ್ಸ್‌ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.