ಬಳ್ಳಾರಿ: ತುಂಗಭದ್ರದಲ್ಲಿ 10 ಟಿಎಂಸಿ ನೀರು ಸಂಗ್ರಹ

ಲೋಕದರ್ಶನ ವರದಿ

ಬಳ್ಳಾರಿ 13: ಕಳೆದ ಹಲವು ದಿನಗಳಿಂದ ತುಂಗಭದ್ರ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಇದೀಗ ಜಲಾಶಯದಲ್ಲಿ 10 ಟಿಎಂಸಿ ನೀರು ಸಂಗ್ರಹವಾಗಿದೆ. ಶನಿವಾರ ಬೆಳಿಗ್ಗೆ ಜಲಾಶಯಕ್ಕೆ 26945 ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು. ಜಲಾಶಯದ ಮಟ್ಟ 1590 ಅಡಿಗೆ ತಲುಪಿದೆ. 

ಜಲಾಶಯದಿಂದ 247 ಕ್ಯೂಸೆಕ್ಸ್ ನೀರನ್ನು ಹೊರ ಬಿಡುತ್ತಿದೆ. ಕಳೆದ ವರ್ಷ ಇದೇ ವೇಳೆಗೆ 60 ಟಿಎಂಸಿ ನೀರು ಸಂಗ್ರಹವಾಗಿತ್ತು. 60 ಸಾವಿರ ಕ್ಯೂಸೆಕ್ಸ್ ನೀರು ಒಳ ಹರಿವಿತ್ತು. 

ದಿನೇ ದಿನೇ ಜಲಾಶಯದಲ್ಲಿ ನೀರಿನ ಸಂಗ್ರಹದ ಪ್ರಮಾಣ ಹೆಚ್ಚುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಮಡಿಕೆ ಹೊಡೆದು ಹದ ಮಾಡಿ ಕೊಳ್ಳುವ ಕಾರ್ಯ ಚುರುಕುಗೊಂಡಿದೆ. ಅಲ್ಲದೇ ಬೊದು ಹೊಡೆದು ಸಕಾಲಕ್ಕೆ ಮಳೆ ಬಂದರೆ ಹತ್ತಿ ಬಿತ್ತನೆಗೂ ಸಿದ್ದತೆ ನಡೆದಿದೆ.